ರಾಜ್ಯದಲ್ಲಿ ಕಳೆದ ಅರವತ್ತು ವರ್ಷಗಳಲ್ಲಿ ಆಗದ ಅಭಿವೃದ್ಧಿ ಆಡಳಿತಾರೂಢ ಬಿಜೆಪಿ ಸರ್ಕಾರ 21ತಿಂಗಳಲ್ಲಿ ಮಾಡಿರುವುದನ್ನು ಸಹಿಸದೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಗೂಬೆ ಕೂರಿಸುವ ಯತ್ನ ಮಾಡುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಕಿಡಿ ಕಾರಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳಿಗೆ ಬಿಜೆಪಿಯ ಅಭಿವೃದ್ಧಿ ಕಾರ್ಯಗಳು ಅಚ್ಚರಿ ಮೂಡಿಸಿದೆ ಎಂದರು. ರೈತರ ಪರ ಇಳಿ ವಯಸ್ಸಿನಲ್ಲೂ ಮಾಜಿ ಪ್ರಧಾನಿ ದೇವೇಗೌಡರು ಹೋರಾಟ ನಡೆಸುತ್ತಿರುವ ಶ್ಲಾಘನೀಯ. ಆದರೆ ಅವರು ನೈಸ್ ವಿಷಯದಲ್ಲಿ ವಿವಾದ ಹುಟ್ಟು ಹಾಕುವ ಮೂಲಕ ಅಭಿವೃದ್ಧಿ ವಿರೋಧಿ ರಾಜಕಾರಣ ಮಾಡುತ್ತಿದ್ದಾರೆಂದು ದೂರಿದರು.
ಅಲ್ಲದೇ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸೇರಿ ದೇವೇಗೌಡರನ್ನು ತಮ್ಮ ಹೋರಾಟದ ನಾಯಕರನ್ನಾಗಿ ಮಾಡಿಕೊಂಡಿದೆ ಎಂದು ವ್ಯಂಗ್ಯವಾಡಿದ ಅವರು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ದೇಶಪಾಂಡೆ, ಕುಮಾರಸ್ವಾಮಿ ಮತ್ತು ರೇವಣ್ಣ ಸೇರಿದಂತೆ ವಿರೋಧ ಪಕ್ಷದ ನಾಯಕರು ಕಾಗದದ ಹುಲಿಗಳಾಗಿದ್ದಾರೆ ಎಂದು ಲೇವಡಿ ಮಾಡಿದರು.