ಲೋಕಸಭೆ ಸ್ಪೀಕರ್‌ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಆಸ್ತಿ ವಿವರ ಸಲ್ಲಿಸದಿರುವ ಬಗ್ಗೆ ಪ್ರತಿಕ್ರಿಯಿಸಿದ್ದು, ಆಸ್ತಿ ವಿವರ ಸಲ್ಲಿಸುವ ವಿಚಾರದಲ್ಲಿ ನನ್ನಿಂದ ಕರ್ತವ್ಯ ಲೋಪವಾಗಿದೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ಸಲ್ಲಿಸಿದ ವಿವರದಲ್ಲಿ ಇದ್ದ ಆಸ್ತಿಯೇ ಈಗಲೂ ಇದೆ. ಏಕೆಂದರೆ, ಚುನಾವಣೆ ಬಳಿಕ ನಾನು ಯಾವುದೇ ಆಸ್ತಿ ಖರೀದಿಸಿಲ್ಲ ಎಂದರು. ಆಸ್ತಿ ವಿವರವನ್ನು ಫೆ.22ರಿಂದ ಆರಂಭಗೊಳ್ಳಲಿರುವ ಸಂಸತ್ತಿನ ಅಧಿವೇಶನಕ್ಕಿಂತ ಮುಂಚೆಯೇ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.
ಲೋಕಸಭೆಗೆ ಚುನಾಯಿತಗೊಂಡ ಮೂರು ತಿಂಗಳಲ್ಲಿ ಪ್ರತಿ ಸದಸ್ಯರೂ ಸ್ಪೀಕರ್ ಅವರಿಗೆ ತಮ್ಮ ಆಸ್ತಿ ವಿವರ ಸಲ್ಲಿಸಬೇಕೆಂಬ ನಿಯಮವಿದೆ. ಆದರೆ ಕೆಲಸದ ಒತ್ತಡದಿಂದ ನಿಯಮ ಪಾಲಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ನನ್ನ ಕಡೆಯಿಂದ ಲೋಪವಾಗಿದೆ ಎಂದು ಗೌಡರು ತಿಳಿಸಿದ್ದಾರೆ.