ರೈತರ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಡುವಿನ ವಾಗ್ದಾಳಿ ಮುಂದುವರಿದಿದ್ದು, ಸರ್ಕಾರದ ಆಗು-ಹೋಗುಗಳ ಬಗ್ಗೆ ಆರ್‌ಎಸ್‌ಎಸ್ ಸಲಹೆ ಸೂಚನೆ ನೀಡುತ್ತದೆ. ಆದರೆ ಯಡಿಯೂರಪ್ಪ ಸರ್ಕಾರ ನಡೆಸುತ್ತಿರುವ ಅನ್ಯಾಯಗಳು ಸಂಘ ಪರಿವಾರಕ್ಕೆ ಕಾಣಿಸುತ್ತಿಲ್ಲವೇ ಎಂದು ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಕೃಷಿ ಜಮೀನನನ್ನು ವಶಪಡಿಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರದು ಅಯೋಗ್ಯ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ಕ್ರೂರ ಪ್ರಾಣಿ ಎಂದ ಅವರು, ಖೇಣಿ ಮಹಾನ್ ಅಪಾಯಕಾರಿ ವ್ಯಕ್ತಿತ್ವ ಹೊಂದಿರುವವರು. ಅವರ ಅಕ್ರಮಗಳನ್ನು ತಡೆಯುವವರೆಗೆ ಮಾಡು ಇಲ್ಲವೇ ಮಡಿ ಹೋರಾಟ ಮಾಡುವುದಾಗಿ ಪ್ರತಿಜ್ಞೆಗೈದರು.
ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ರೈತರ ಹಿತ ಕಾಯುವ ಬದಲು, ರೈತರನ್ನೇ ಬೀದಿಪಾಲು ಮಾಡಲು ಹೊರಟಿದ್ದಾರೆ ಎಂದು ಗುಡುಗಿದರು.