ರಾಜಕೀಯ ಲಾಭಕ್ಕಾಗಿ ಹೋರಾಟ ನಡೆಸುತ್ತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ರೈತ ಜಾಗೃತಿ ಜಾಥಾದಿಂದ ರೈತರ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆಗೆ ಯಾವುದೇ ಅಡ್ಡಿ ಉಂಟಾಗುವುದಿಲ್ಲ ಎಂದು ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಮಂಗಳವಾರ ವಿಭಾಗ ಮಟ್ಟದ ಕೈಗಾರಿಕೆ ಅದಾಲತ್ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌಡರು ಹಿರಿಯ ರಾಜಕಾರಣಿ, ಮುತ್ಸದ್ಧಿ. ಅವರು ಸರ್ಕಾರಕ್ಕೆ ಉತ್ತಮವಾದ ಸಲಹೆ-ಸೂಚನೆಗಳನ್ನು ನೀಡಲಿ ಎಂದರು.
ಗೌಡರು ರಾಜ್ಯ ಸರ್ಕಾರದ ವಿರುದ್ಧ ರೈತರನ್ನು ಎತ್ತಿಕಟ್ಟುತ್ತಿದ್ದಾರೆ ಎಂದು ಆರೋಪಿಸಿದ ಅವರು, ಹಾಸನದಲ್ಲಿ ಸರ್ಕಾರ ಭೂ ಸ್ವಾಧೀನಕ್ಕೆ ಮುಂದಾದಾಗ ಕೆಲವರು ಪ್ರತಿಭಟಿಸಿದ್ದರಿಂದ ಯೋಜನೆಯನ್ನು ಕೈಬಿಡಲಾಗಿತ್ತು. ಆದರೆ ನಂತರ ನಾನು ಹಾಸನಕ್ಕೆ ಭೇಟಿ ನೀಡಿದಾಗ, ಆ ಜಮೀನಿನ ಮಾಲೀಕರೇ ಬಂದು ಜಮೀನು ನೀಡಲು ಸಿದ್ದರಿದ್ದೇವೆ ಎಂದು ತಿಳಿಸಿದ್ದರು. ಪ್ರತಿಭಟನೆ ನಡೆಸಿದವರು ಭೂ ಮಾಲೀಕರೇ ಅಲ್ಲ ಎಂಬುದಾಗಿಯೂ ಹೇಳಿದ್ದರು ಎಂದು ವಿವರಿಸಿದರು.
ನಾವು ಎಲ್ಲೂ ಬಲವಂತದಿಂದ ರೈತರ ಭೂಮಿಯನ್ನು ವಶಪಡಿಸಿಕೊಂಡಿಲ್ಲ. ಆದರೆ ಗೌಡರು ಅನಾವಶ್ಯಕವಾಗಿ ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆಂದು ಹೇಳಿದರು.