ನೆರೆ ಸಂತ್ರಸ್ತರಿಗಾಗಿ ಮಾತಾ ಅಮೃತಾನಂದಮಯಿ ವತಿಯಿಂದ ರಾಯಚೂರು ಜಿಲ್ಲೆಯ ಡೊಂಗರಾಪುರದಲ್ಲಿ ನಿರ್ಮಿಸಿದ್ದ ಮನೆಗಳ ಕೀಲಿ ಕೈಯನ್ನು ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದರು.
ನಗರದ ಜ್ಞಾನಭಾರತಿ ಸಮೀಪ ಇರುವ ಮಾತಾ ಅಮೃತಾನಂದಮಯಿ ಮಠದಲ್ಲಿ ನಡೆದ ಸಮಾರಂಭದಲ್ಲಿ, ನೆರೆ ಸಂತ್ರಸ್ತರಿಗಾಗಿ ಆಸರೆ ಯೋಜನೆಯಡಿಯಲ್ಲಿ ನಿರ್ಮಿಸಿದ್ದ ಸುಮಾರು 100 ಮನೆಗಳ ಕೀಲಿಯನ್ನು ಅಮೃತಾನಂದ ಮಯಿ ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದರು.
ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಕಳೆದ ವರ್ಷ ಪ್ರವಾಹದಿಂದಾಗಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಾವಿರಾರು ಜನರು ಮನೆ-ಮಠ ಕಳೆದುಕೊಂಡಿದ್ದರು. ಸರ್ಕಾರ ಹಾಗೂ ಮಠ, ಸಾರ್ವಜನಿಕರಿಂದ ಮನೆಗಳ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿರುವುದಾಗಿ ಹೇಳಿದರು.
ಆ ನಿಟ್ಟಿನಲ್ಲಿ ಮಾತಾ ಅಮೃತಾನಂದಮಯಿ ಅವರು ನೂರು ಮನೆಗಳನ್ನು ಶೀಘ್ರವೇ ನಿರ್ಮಿಸಿಕೊಟ್ಟಿರುವುದಕ್ಕೆ ಶ್ಲಾಘಿಸಿದರು. ಅಲ್ಲದೇ ಅಮೃತಾನಂದ ಮಯಿ ಮಠಕ್ಕೆ 5ಕೋಟಿ ರೂಪಾಯಿ ಅನುದಾನ ನೀಡುವುದಾಗಿಯೂ ಘೋಷಿಸಿದರು. ಮಠದ ವತಿಯಿಂದ ನಿರ್ಮಾಣಗೊಳ್ಳಲಿರುವ ಆಸ್ಪತ್ರೆಗಾಗಿ ರಾಮಸಂದ್ರದಲ್ಲಿ 15ಎಕರೆ ಭೂಮಿಯನ್ನು ನೀಡುವುದಾಗಿಯೂ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಬಡವರ, ಜನಸಾಮಾನ್ಯರ ಕಣ್ಣೀರು ಒರೆಸುವಲ್ಲಿ ಮಠ-ಮಾನ್ಯಗಳ ಕಾರ್ಯ ಮಾದರಿಯಾದದ್ದು ಎಂದ ಅವರು, ಸರ್ಕಾರದ ಜೊತೆಗೆ ಮಠಗಳು ಕೈಗೂಡಿಸುವುದರಿಂದ ಜನಪರ ಕಾರ್ಯ ಸಾಂಗವಾಗಿ ನೆರವೇರಲು ಸಹಕಾರಿಯಾಗುತ್ತದೆ ಎಂದರು.