ವಿವಾದದ ಕೇಂದ್ರ ಬಿಂದುವಾಗಿರುವ ನೈಸ್ ಯೋಜನೆ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ನೀಡುವ ತೀರ್ಪಿಗೆ ರಾಜ್ಯ ಸರ್ಕಾರ ಬದ್ಧ ಎಂದು ಸಾರಿಗೆ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈಸ್ ಯೋಜನೆಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಚರ್ಚೆ ನಡೆಸುವುದಕ್ಕೂ ಸಿದ್ಧ. ಈ ಕುರಿತು ಕೇಂದ್ರ ಸರ್ಕಾರ ನೀಡುವ ಸಲಹೆಯನ್ನು ಪಾಲಿಸಲಾಗುವುದು ಎಂದರು.
ಮಾಜಿ ಪ್ರಧಾನಿ ದೇವೇಗೌಡರು ಈ ಯೋಜನೆಯನ್ನು ವಿನಾಕಾರಣ ವಿವಾದಗೊಳ್ಳುವಂತೆ ಮಾಡಿ ರೈತರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇದೀಗ ಬಿಬಿಎಂಪಿ ಹಾಗೂ ಗ್ರಾಮಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಗೌಡರು ರೈತರ ಪರ ಹೋರಾಟ ನಡೆಸುತ್ತಿದ್ದಾರೆ ಎಂದು ದೂರಿದರು. ಇದೇ ವೇಳೆ ಸರ್ಕಾರದ ನೀತಿಯನ್ನು ಸಮರ್ಥಿಸಿಕೊಂಡ ಅವರು, ಕೈಗಾರಿಕಾ ಅಭಿವೃದ್ದಿಯ ದೃಷ್ಟಿಯಿಂದ ಭೂ ಸ್ವಾಧೀನ ಅನಿವಾರ್ಯ ಎಂದು ಹೇಳಿದರು.