ಪಶ್ಚಿಮ ಬಂಗಾಳ ಸರ್ಕಾರ ಅಲ್ಪಸಂಖ್ಯಾತರಿಗೆ ಶೇ.10ರಷ್ಟು ಮೀಸಲಾತಿ ನೀಡಿರುವುದನ್ನು ತೀವ್ರವಾಗಿ ವಿರೋಧಿಸಿರುವ ಬಜರಂಗದಳ ಜಿಲ್ಲಾ ಸಮಿತಿ ಮತ್ತು ವಿಶ್ವಹಿಂದೂ ಪರಿಷತ್ ಜಿಲ್ಲಾ ಘಟಕ ಬುಧವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದೆ.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಜರಂಗದಳ ಮುಖಂಡ ಕೇಶವ ಹೆಗಡೆ, ಅಲ್ಪಸಂಖ್ಯಾತರ ಓಲೈಕೆ ಮತ್ತು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಮ್ಯುನಿಷ್ಟ್ ಪಕ್ಷ ಮೀಸಲಾತಿ ನೀಡಿದೆ ಎಂದು ಆರೋಪಿಸಿದರು.
ಈಗಾಗಲೇ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಮೀಸಲಾತಿ ನೀಡಿದ ನೆರೆಯ ಆಂಧ್ರಪ್ರದೇಶ ಸರ್ಕಾರದ ಕ್ರಮವನ್ನು ಸುಪ್ರೀಂಕೋರ್ಟ್ ವಜಾಗೊಳಿಸಿರುವ ದೃಷ್ಟಾಂತ ನಮ್ಮೆದುರಿಗೆ ಇದೆ. ಆದರೂ ಕೂಡ ಪಶ್ಚಿಮ ಬಂಗಾಳ ಸರ್ಕಾರ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿರುವುದು ಸರಿಯಾದ ಕ್ರಮವಲ್ಲ ಎಂದರು.
ಅಲ್ಪಸಂಖ್ಯಾತರಿಗೆ ನೀಡಿರುವ ಮೀಸಲಾತಿಯನ್ನು ರದ್ದುಗೊಳಿಸುವಂತೆ ಕೋರಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬುದ್ದದೇವ ಭಟ್ಟಾಚಾರ್ಯ ಅವರಿಗೆ ಬರೆದ ಮನವಿ ಪತ್ರವನ್ನು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಸಲ್ಲಿಸಿದರು.