ನೈಸ್ ಕಂಪನಿಯ ಬಿಎಂಐಸಿ ಯೋಜನೆ ಪ್ರಕರಣದ ಕುರಿತಂತೆ ಪದೇ, ಪದೇ ಅಪಸ್ವರ ಎತ್ತುತ್ತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ನೈಸ್ ಕಂಪನಿ ಮುಖ್ಯಸ್ಥ ಅಶೋಕ್ ಖೇಣಿ ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದು, ದೇವೇಗೌಡ ರಾಜ್ಯದ ಸರ್ವಾಧಿಕಾರಿಯಲ್ಲ ಎಂದು ಗುಡುಗಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗೌಡರ ಗೆಳೆಯನಿರಬಹುದು. ನಾನೇನು ದಾವೂದ್ ತರ ಪಾತಕಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಶೋಕ್ ಖೇಣಿ ದಾವೂದ್ ಇಬ್ರಾಹಿಂಗಿಂತಲೂ ತುಂಬಾ ಡೇಂಜರ್ ಎಂಬ ಗೌಡರ ಹೇಳಿಕೆಗೆ ಖೇಣಿ ತಿರುಗೇಟು ನೀಡಿದ ಪರಿ ಇದಾಗಿದೆ.
ಪ್ರತಿಯೊಂದು ವಿಚಾರಕ್ಕೂ ಹೋರಾಟ, ಅಪಸ್ವರ ಎತ್ತುವ ಮೂಲಕ ಗೌಡರು ಸರ್ವಾಧಿಕಾರಿಯಂತೆ ವರ್ತಿಸುವ ಅಗತ್ಯವಿಲ್ಲ ಎಂದು ಸಲಹೆ ನೀಡಿರುವ ಖೇಣಿ, ರಾಜ್ಯದ ಪ್ರತಿಯೊಬ್ಬ ಕನ್ನಡಿಗನೂ ಸರ್ವಾಧಿಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನೈಸ್ ಕಂಪನಿ ಕೋಟ್ಯಂತರ ರೂಪಾಯಿ ಆಸ್ತಿ ಲೂಟಿ ಮಾಡುತ್ತಿದೆ ಎಂದು ಆರೋಪಿಸುತ್ತಿರುವ ದೇವೇಗೌಡರಿಗೆ ಇಷ್ಟೊಂದು ಪ್ರಮಾಣದ ಆಸ್ತಿ ಎಲ್ಲಿಂದ ಬಂತು ಎಂದು ಹೇಳಲಿ ಎಂದು ಬಹಿರಂಗವಾಲಿ ಸವಾಲು ಹಾಕಿದರು.
ಉತ್ತರ ಕರ್ನಾಟಕ ನೆರೆ ಹಾವಳಿಯಿಂದ ತತ್ತರಿಸಿ ಹೋಗಿದ್ದು, ಸಾವಿರಾರು ಜನ ಮನೆ ಮಠ ಕಳೆದುಕೊಂಡಾಗ ಆ ಸಂದರ್ಭದಲ್ಲಿ ಗೌಡರಿಗೆ ಕಾಳಜಿ ಬಂದಿರಲಿಲ್ಲ, ಇದೀಗ ಗ್ರಾಮ ಪಂಚಾಯಿತಿ ಚುನಾವಣೆ ಬಂದ ಕೂಡಲೇ ರೈತರ ಬಗ್ಗೆ ವಿಶೇಷ ಕಾಳಜಿ ಮೂಡಿದೆ ಎಂದು ವ್ಯಂಗ್ಯವಾಡಿದರು.