ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಯಾನನಗರಿ ಬೆಂಗಳೂರಿನಲ್ಲಿ ನಡೆಸಲು ಕನ್ನಡ ಸಾಹಿತ್ಯ ಪರಿಷತ್ ಚಿಂತನೆ ನಡೆಸಿದೆ.
ಹಳೆ ಮೈಸೂರು ಭಾಗದಲ್ಲಿ ಕಳೆದ ನಾಲ್ಕಾರು ವರ್ಷಗಳಿಂದ ಸಾಹಿತ್ಯ ಸಮ್ಮೇಳನ ನಡೆಯದೇ ಇರುವುದರಿಂದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬೆಂಗಳೂರಿನಲ್ಲಿ ನಡೆಸುವ ಆಲೋಚನೆ ಮಾಡಿದೆ. ಆದರೆ ಈ ಸಂಬಂಧ ಯಾವುದೇ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಕಸಾಪ ಕಾರ್ಯಕಾರಿ ಸಮಿತಿಯಲ್ಲೇ ಮುಂದಿನ ಸಮ್ಮೇಳನ ಎಲ್ಲಿ ನಡೆಯಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಮೂಲಗಳು ತಿಳಿಸಿವೆ.
ಈ ಮಧ್ಯೆ ಬೇರೆ ಬೇರೆ ಜಿಲ್ಲೆಗಳಿಂದಲೂ ಸಮ್ಮೇಳನ ನಡೆಸುವಂತೆ ಬೇಡಿಕೆ ಬರುತ್ತಿದ್ದು, ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನಕ್ಕೆ ಬರುವುದಾಗಿ ಸಾಹಿತ್ಯ ಪರಿಷತ್ ತಿಳಿಸಿದೆ.
ರಾಜಧಾನಿಯಲ್ಲಿ ಕನ್ನಡ ಅಧೋಗತಿಗೆ ಇಳಿಯುತ್ತಿರುವುದರಿಂದ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬೆಂಗಳೂರು ನಗರದಲ್ಲಿ ನಡೆಸಲು ಸಾರ್ವತ್ರಿಕ ಅಭಿಪ್ರಾಯವ್ಯಕ್ತವಾಗಿದೆ ಎಂದು ಪರಿಷತ್ ಹೇಳಿದೆ.