ಎಬಿವಿಪಿ ಮತ್ತು ಸಂಘ ಪರಿವಾರ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಹೂಡಲಾಗಿದ್ದ ಒಟ್ಟು 16 ಮೊಕದ್ದಮೆಗಳನ್ನು ವಾಪಸ್ ಪಡೆಯಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
ಶನಿವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಭೆಯ ನಂತರ ಗೃಹ ಸಚಿವ ವಿ.ಎಸ್.ಆಚಾರ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಬಾಗಲಕೋಟೆಯ ಅಮೀನಗಡದಲ್ಲಿ ಗಣೇಶ ಮೆರವಣಿಗೆ ವೇಳೆ 2003ರಲ್ಲಿ ನಡೆದ ಗಲಾಟೆಯ ಒಂದು ಪ್ರಕರಣ, ಮನೆ ಪಾಠ ವಿಚಾರದಲ್ಲಿ ಗದ್ದಲವೆಬ್ಬಿಸಿದ ಎಬಿವಿಪಿ ಕಾರ್ಯಕರ್ತರ ವಿರುದ್ಧ ಧಾರವಾಡ ಉಪಠಾಣೆಯಲ್ಲಿ ದಾಖಲಾಗಿದ್ದ 10ಪ್ರಕರಣ ಮತ್ತು ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಸಾರ್ವಜನಿಕ ಘರ್ಷಣೆಗೆ ಸಂಬಂಧಿಸಿದಂತೆ ಹೂಡಲಾಗಿದ್ದ 5ಮೊಕದ್ದಮೆಗಳನ್ನು ವಾಪಸ್ ಪಡೆಯುವ ನಿರ್ಧಾರಕ್ಕೆ ಬಂದಿದೆ.
ಜನಪರ ಹೋರಾಟದ ಹಿನ್ನೆಲೆಯಲ್ಲಿ ಎಬಿವಿಪಿ, ಸಂಘಪರಿವಾರ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಮೊಕದ್ದಮೆಗಳನ್ನು ವಾಪಸ್ ಪಡೆಯುವ ನಿರ್ಧಾರ ಕೈಗೊಂಡಿರುವುದಾಗಿ ಆಚಾರ್ಯ ಈ ಸಂದರ್ಭದಲ್ಲಿ ತಿಳಿಸಿದರು.