ಬಳ್ಳಾರಿ, ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆ ವ್ಯಾಪ್ತಿಯ ರಕ್ಷಿತ ಮೀಸಲು ಅರಣ್ಯ ಪ್ರದೇಶದಲ್ಲಿನ ಆರು ಬ್ಲಾಕ್‌ಗಳಲ್ಲಿ ಹಲವು ಷರತ್ತುಗಳಿಗೆ ಒಳಪಡಿಸಿ ಗಣಿಗಾರಿಕೆ ನಡೆಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಸಂಪುಟ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ವಿ.ಎಸ್.ಆಚಾರ್ಯ, ಬಳ್ಳಾರಿಯಲ್ಲಿ ನಾಲ್ಕು, ಶಿವಮೊಗ್ಗ ಮತ್ತು ಮೈಸೂರಿನಲ್ಲಿ ತಲಾ ಒಂದು ಬ್ಲಾಕ್‌ಗಳಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ ಎಂದರು.
ಈ ಪ್ರದೇಶಗಳಲ್ಲಿ ಗಣಿಗಾರಿಕೆ ಮಾಡುವಂತಿಲ್ಲ ಎಂದು 2003ರಲ್ಲಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದನ್ನು ಈಗ ರದ್ದುಪಡಿಸಿ, ಈ ಪ್ರದೇಶವನ್ನು ಗಣಿಗಾರಿಕೆ ನಡೆಸಲು ಅನುವು ಮಾಡಿಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಬ್ಲಾಕ್‌ಗಳಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡುವುದಕ್ಕಿಂತ ಮುಂಚೆ ನಾಲ್ಕು ಷರತ್ತುಗಳನ್ನು ಈಡೇರಿಸಬೇಕು ಎನ್ನುವ ಷರತ್ತು ಹಾಕಲಾಗಿದೆ. ಕೇವಲ ಅದಿರು ತೆಗೆದು ಮಾರುವಂತಿಲ್ಲ, ಬದಲಿಗೆ ಅದರಿಂದ ಉತ್ಪನ್ನ ತಯಾರಿಸಬೇಕು. ಉದ್ಯೋಗ ಸೃಷ್ಟಿಗೆ ಅವಕಾಶ ಕಲ್ಪಿಸುವ ಕಾರ್ಖಾನೆ ಸ್ಥಾಪಿಸಿದವರಿಗೆ ಮಾತ್ರ ಅನುಮತಿ ನೀಡುವುದು. ಪರಿಸರ ಖಾತೆಯ ವಿಶೇಷ ಅನುಮತಿ, ಕೇಂದ್ರ ಸರ್ಕಾರದ ಅನುಮತಿ ಪಡೆದಿರಬೇಕು. ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಮಂಜುರಾತಿ ನೀಡುವ ಸಿಎಂ ನೇತೃತ್ವದ ಉನ್ನತಾಧಿಕಾರ ಸಮಿತಿಯಲ್ಲಿ ಇದಕ್ಕೆ ಒಪ್ಪಿಗೆ ದೊರೆಯಬೇಕು ಎಂಬ ನಿಬಂಧನೆ ಹಾಕಲಾಗಿದೆ.