ನೂತನ ನಾಡಪ್ರಭು ಕೆಂಪೇಗೌಡ ಬಡಾವಣೆಯ ಸರ್ವೆ ಕಾರ್ಯಕ್ಕೆ ಸೋಮವಾರ ತೆರಳಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಧಿಕಾರಿಗಳ ಮೇಲೆ ರೊಚ್ಚಿಗೆದ್ದ ಸ್ಥಳೀಯರು ಹಲ್ಲೆ ನಡೆಸಿ ಮೂರು ಕಾರುಗಳನ್ನು ಜಖಂಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಸರ್ವೇಕಾರ್ಯಕ್ಕೆ ಅಡ್ಡಿಪಡಿಸಿ ಏಕಾಏಕಿ ಹಲ್ಲೆಗೆ ಮುಂದಾಗಿದ್ದರಿಂದ ಹೆದರಿದ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳು ಓಡಿ ಹೋಗಲು ಯತ್ನಿಸಿದರಾದರೂ ಅವರನ್ನು ಹಿಡಿದ ಸ್ಥಳೀಯರು ಬಟ್ಟೆ ಹರಿದು ಹಾಕಿ ಥಳಿಸಿದರು.
ಅಧಿಕಾರಿಗಳು ತಂದಿದ್ದ ಕಾರುಗಳನ್ನು ಜಖಂಗೊಳಿಸಿದ ಸ್ಥಳೀಯರು ಅಧಿಕಾರಿಗಳನ್ನು ಮನಬಂದಂತೆ ಥಳಿಸಿ ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ. ಮಹಿಳೆಯರು ಸೇರಿದಂತೆ ಮಕ್ಕಳೂ ಸಹ ಬಡಿದಾಟದಲ್ಲಿ ಸೇರಿಕೊಂಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಧಿಕಾರಿಗಳನ್ನು ರಕ್ಷಿಸಿದ್ದು,ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಇರುವುದರಿಂದ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬಿಡಿಎ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಸ್ಥಳೀಯರ ಮೇಲೆ ಕೊಲೆಯತ್ನದ ಪ್ರಕರಣವನ್ನು ತಾವರೆಕೆರೆ ಪೊಲೀಸರು ದಾಖಲಿಸಿಕೊಂಡಿದ್ದಾರೆ.