ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಮನಸ್ಸು ಮಾಡಿದರೆ ಒಂದೇ ದಿನದಲ್ಲಿ ಬಿಜೆಪಿ ಸರ್ಕಾರ ಉರುಳಿಸಬಹುದು ಎನ್ನುವ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯಿಲಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಕಾನೂನು ಸಚಿವ ಸುರೇಶ್ ಕುಮಾರ್, ಸರ್ಕಾರವನ್ನು ಉರುಳಿಸುವ ಅಧಿಕಾರ ಇರುವುದು ರಾಜ್ಯದ ಜನತೆಗೆ ಹೊರತು ಸೋನಿಯಾಗಾಂಧಿಗೆ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
ಕೇಂದ್ರದ ಕಾನೂನು ಸಚಿವರಾಗಿರುವ ಮೊಯ್ಲಿ ಅವರ ಹೇಳಿಕೆ ಅವರಿಗೆ ಪ್ರಾಥಮಿಕ ಪ್ರಜ್ಞೆ ಮತ್ತು ವಿವೇಕದ ಕೊರತೆ ಇದೆ ಎಂಬುದನ್ನು ತೋರಿಸುತ್ತದೆ. ಕಾನೂನು ಸಚಿವರು ಕಾನೂನು ಉಲ್ಲಂಘನೆ ಮಾಡುವ ಕೆಲಸಕ್ಕೆ ಮುಂದಾಗಬಾರದು, ಕಾನೂನು ಉಲ್ಲಂಘನೆ ಮಾಡದೆ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ರಾಜ್ಯದ ಜನತೆಯಿಂದ ಆಯ್ಕೆಯಾಗಿರುವ ಬಹುಮತದ ಸರ್ಕಾರವನ್ನು ಉರುಳಿಸುವ ಮಾತುಗಳನ್ನು ಹೇಳುವ ಮಲಕ ಮೊಯ್ಲಿಯವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಗೇಲಿ ಮಾಡಿದ್ದಾರೆಂದು ಕಿಡಿಕಾರಿದರು. ಈ ಸರ್ಕಾರ ಸೋನಿಯಾಗಾಂಧಿವರ ಮರ್ಜಿಯಿಂದ ಅಧಿಕಾರಕ್ಕೆ ಬಂದಿಲ್ಲ. ವೀರಪ್ಪ ಮೊಯ್ಲಿಯವರು ಸಂಯಮ ಕಾಯ್ದುಕೊಳ್ಳಲಿ ಎಂದು ವ್ಯಂಗ್ಯವಾಡಿದರು