ದನ, ಆಡು ಸೇರಿದಂತೆ ಇತರ ಪ್ರಾಣಿಗಳ ಹಾಲನ್ನು ಸಾರ್ವಜನಿಕರು ಸೇವಿಸುವುದನ್ನು ನಿಲ್ಲಿಸಬೇಕು. ಅದು ಕೂಡ ಪ್ರಾಣಿ ಹಿಂಸೆಗೆ ಸಮಾನ ಎಂದು ಪೀಪಲ್ ಫಾರ್ ಎನಿಮಲ್ಸ್ ಸಂಸ್ಥೆಯ ಸಂಸ್ಥಾಪಕಿ ಮನೇಕಾ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆಂಗೇರಿ ಸಮೀಪದ ಪಿಎಫ್‌ಎ ಕೇಂದ್ರದ ಆವರಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಿಎಫ್‌ಎ ಜ್ಞಾನ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಾಲು ಪ್ರಾಣಿಗಳ ರಕ್ತದ ಜೊತೆ ಬರುವ ಬಿಳಿ ದ್ರವ್ಯ. ಅದರ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದಿರುವ ಗಾಂಧಿ, ಕೋಳಿ ಮೊಟ್ಟೆ ಸೇವನೆ ಕೂಡ ಭ್ರೂಣ ಹತ್ಯೆಗೆ ಸಮಾನ ಎಂದು ಹೇಳಿದರು.
ಹಾಲು ಮತ್ತು ಮೊಟ್ಟೆಯನ್ನು ನಾನು ಸೇವಿಸುವುದಿಲ್ಲ, ಆ ಕಾರಣದಿಂದ ನಾನು ಸಾರ್ವಜನಿಕರು ಅದನ್ನು ಸೇವಿಸದಂತೆ ಮನವಿ ಮಾಡುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು. ದನ, ಆಡನ್ನು ಹತ್ಯೆ ಮಾಡುವುದು ಕೂಡ ತಪ್ಪು ಅದೇ ರೀತಿಯಲ್ಲಿ ಅವುಗಳ ಹಾಲು, ಕೋಳಿ ಮೊಟ್ಟೆ ಸೇವನೆಯನ್ನೂ ಕೂಡ ಜನರು ವರ್ಜಿಸಬೇಕು ಎಂದು ತಿಳಿಸಿದರು.