ಬಿಸಿಯಾಗಿದೆ, ನಶೆಯೇರಿದೆ, ಮಿತಿ ಮೀರಿದೆ ಜೋಪಾನ ಎಂದು ಎಚ್ಚರಿಸುತ್ತಲೇ ಕುಡಿತಕ್ಕೆ ಶರಣಾಗುವ, ಭಾರತದ ಸಿಲಿಕಾನ್ ಕಣಿವೆ ಬೆಂಗಳೂರಿನಲ್ಲಿನ್ನು ಬಾರ್ ಬಾಲೆಯರು ಮೈ ತೋರಿಸುವಂತಿಲ್ಲ. ಅವರು ಕೂಡ ಮೈ ಮುಚ್ಚುವ ಭಾರತೀಯ, ವಿಶೇಷವಾಗಿ ದಕ್ಷಿಣ ಭಾರತದ ಉಡುಗೆಯಾದ ಲಂಗ ದಾವಣಿ ಧರಿಸಿಯೇ ಈ ನಶೆಯನ್ನು ಸರ್ವ್ ಮಾಡಲಿದ್ದಾರೆ!
ಇನ್ನು ಬೆಂಗಳೂರಿನ ಪಬ್‌ಗಳ ಒಳಗೆ ಹೋದರೂ ನಿಮಗೆ ಭಾರತೀಯತೆಯ ಸವಿ. ಇದೆಲ್ಲದಕ್ಕೆ ಕಾರಣ ಆಡಳಿತಾರೂಢ ಬಿಜೆಪಿ ಸರಕಾರ. ಬಾರ್‌ಗಳಲ್ಲಿ ಮದ್ಯ ಪೂರೈಸುವ ನೂರಾರು ಬಾರ್ ಬಾಲೆಯರು ಮೈತೋರಿಸುತ್ತಾ ಗ್ರಾಹಕರನ್ನು 'ಆಕರ್ಷಿಸಿ' ಮದ್ಯ ವಿತರಣೆ ಮಾಡುವುದು ಬಿ.ಎಸ್.ಯಡಿಯೂರಪ್ಪ ಸರಕಾರಕ್ಕೆ ಇಷ್ಟವಿಲ್ಲ. ಇದಕ್ಕಾಗಿಯೇ ಈ ಬಾರ್ ಬಾಲೆಯರಿಗೆ ಲಂಗ ದಾವಣಿ ತೊಡಿಸಲು ಉದ್ದೇಶಿಸಿದೆ.
ಇದೇ ಕಾರಣಕ್ಕೆ, ಡೀಸೆಂಟ್ ಆಗಿರೋ ಉಡುಗೆ ತಯಾರಿಸಿ ಕೊಡುವಂತೆ ಸರಕಾರವು ಬೆಂಗಳೂರಿನ ಫ್ಯಾಶನ್ ಸಂಸ್ಥೆಯೊಂದರ ಮೊರೆ ಹೋಗಿದೆ.
ಇದಕ್ಕೆ ಶ್ರೀರಾಮ ಸೇನೆಯ 'ಸಂಸ್ಕೃತಿ ರಕ್ಷಣೆ' ಅಭಿಯಾನವೇ ಪ್ರೇರಣೆಯಾಗಿರಬಹುದೇ? ಇಲ್ಲ ಎನ್ನುತ್ತಾರೆ ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ.
ಹುಡುಗಿಯರು ಕೂಡ ಬಾರ್ ಟೆಂಡರ್‌ಗಳಾಗಿ ಕೆಲಸ ಮಾಡಲು ಸುಪ್ರೀಂ ಕೋರ್ಟ್ ನೀಡಿರುವ ಅನುಮತಿಯನ್ನು ಬಾರ್ ಮಾಲೀಕರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಸ್ಥಳೀಯ ಭಾಷೆಯಲ್ಲಿ ಹೇಳಬಹುದಾದರೆ ಲೈವ್ ಬ್ಯಾಂಡ್ ಕಲಾವಿದರಾಗಿ ಬಾರ್ ನರ್ತಕಿಯರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ರೇಣುಕಾಚಾರ್ಯ.
ಕೆಲಸದ ತೀರಾ ಅನಿವಾರ್ಯ ಸ್ಥಿತಿಯಲ್ಲಿರುವ ಹುಡುಗಿಯರು ಬಾರ್‌ಟೆಂಡರ್‌ಗಳಾಗಿ ಕೆಲಸ ಮಾಡಲಿ. ಅವರಿಗೆ ಕೂಡ ವಸ್ತ್ರಸಂಹಿತೆಯೊಂದನ್ನು ಜಾರಿಗೊಳಿಸಿದರೆ, ನಾವು ಈ ಲೈವ್ ಬ್ಯಾಂಡ್ ಕಲಾವಿದರು ಎಂಬ ಕಳೆಯನ್ನು ನೀಗಿಸಬಹುದು ಎನ್ನುತ್ತಾರವರು.
ಆದರೆ ಇದಕ್ಕೆ ವಿರೋಧ ಪಕ್ಷಗಳ ವಿರೋಧ ಇದ್ದೇ ಇದೆ. ಮಾಜಿ ಕಾನೂನು ಸಚಿವ, ಜೆಡಿಎಸ್ ಶಾಸಕ ಎಂ.ಸಿ.ನಾಣಯ್ಯ ಅವರಂತೂ "ಇದೊಂದು ಆರ್ಎಸ್ಎಸ್ ಪ್ರೇರಿತ ನಿರ್ಧಾರ. ಬಾರ್ ಹುಡುಗಿಯರು ಖಾಕಿ ಪ್ಯಾಂಟು, ಬಿಳಿ ಬ್ಲೌಸ್, ಬಿಳಿ ಟೋಪಿ ಧರಿಸಬೇಕೆಂಬುದು ಅವರ ಉದ್ದೇಶವೇ?" ಎಂದು ಪ್ರಶ್ನಿಸಿದ್ದಾರೆ.
ಆದರೆ, ಬಾರ್ ಬಾಲೆಯರು ಹೆಚ್ಚಾಗಿ ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗಿರುವುದು ಆಗಾಗ್ಗೆ ಪತ್ತೆಯಾಗುತ್ತಲೇ ಇರುತ್ತದೆ ಎನ್ನುತ್ತಾರೆ ಅಬಕಾರಿ ಅಧಿಕಾರಿಗಳು. "ಲೈವ್ ಬ್ಯಾಂಡ್ ಕಲಾವಿದರಾಗಿ ಕೆಲಸ ಮಾಡುತ್ತಿರುವ ಬಾರ್‌ಟೆಂಡರ್‌ಗಳು ಕೇವಲ ಮದ್ಯ ಸರಬರಾಜು ಮಾತ್ರವೇ ಮಾಡುತ್ತಿಲ್ಲ, ಗ್ರಾಹಕರೊಂದಿಗೆ ನರ್ತಿಸುತ್ತಲೂ ಇರುವುದನ್ನು ಹಲವು ಪಬ್‌ಗಳಲ್ಲಿ ನೋಡಿದ್ದೇವೆ. ಕೆಲವರಂತೂ ಅವರಿಗೆ ಪೂರ್ಣ ಮನರಂಜನೆ ನೀಡುತ್ತಾರೆ. ಇದು ನಿಯಮಾವಳಿಗಳ ಉಲ್ಲಂಘನೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಾನೂನು ಸುವ್ಯವಸ್ಥೆ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಸರಕಾರವು ಪಬ್‌ಗಳು ಮತ್ತು ಬಾರ್‌ಗಳಲ್ಲಿ ಲೈವ್ ಬ್ಯಾಂಡ್ ಅನ್ನು ನಿಷೇಧಿಸಿತ್ತು. ರೌಡಿಗಳು ಇಲ್ಲಿಗೆ ನುಗ್ಗಿ ಆಗಾಗ್ಗೆ ಈ 'ಕಲಾವಿದೆ'ಯರನ್ನು ಅಪಹರಿಸಿಕೊಂಡು ಹೋಗುತ್ತಿದ್ದರು. ಇಂತಹ ಪ್ರದರ್ಶನಗಳಿರುವಲ್ಲಿ ಮಾದಕ ದ್ರವ್ಯ ಕಳ್ಳಸಂತೆಕೋರರು ಕೂಡ ಸಕ್ರಿಯವಾಗಿದ್ದರು.