ವಿನಿವಿಂಕ್ ಶಾಸ್ತ್ರಿ ಆಸ್ತಿ ಮಾರಾಟ ಮಾಡಿ: ಸರ್ಕಾರಕ್ಕೆ ಸುಪ್ರೀಂ
ನವದೆಹಲಿ, ಮಂಗಳವಾರ, 23 ಫೆಬ್ರವರಿ 2010( 16:25 IST )
ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದ ಪ್ರಮುಖ ರೂವಾರಿ ವಿನಿವಿಂಕ್ ಶಾಸ್ತ್ರಿಗೆ ಸೇರಿರುವ ಎಲ್ಲಾ ಆಸ್ತಿಯನ್ನು ಸರ್ಕಾರ 12ವಾರಗಳೊಳಗೆ ಮಾರಾಟ ಮಾಡುವಂತೆ ಕಾಲಾವಕಾಶ ನೀಡಿ ಆದೇಶ ಹೊರಡಿಸಿದೆ.
ಈ ಮಧ್ಯೆ ಶಾಸ್ತ್ರಿಗೆ ನೀಡಿರುವ ಮಧ್ಯಂತರ ಜಾಮೀನು ಅವಧಿಯನ್ನು ಜುಲೈ6ರವರೆಗೆ ವಿಸ್ತರಿಸಿ ಆದೇಶ ನೀಡಿದೆ. ಸಾರ್ವಜನಿಕರು ಹೂಡಿದ್ದ ಸಾವಿರಾರು ಕೋಟಿ ರೂಪಾಯಿಗಳ ಪಂಗನಾಮ ಹಾಕಿರುವ ಆರೋಪ ಎದುರಿಸುತ್ತಿದ್ದ ವಿನಿವಿಂಕ್ ಕಂಪನಿಯ ಮಾಲೀಕ ಶ್ರೀನಿವಾಸ್ ಶಾಸ್ತ್ರಿಯ ಆಸ್ತಿಯನ್ನು ಮಾರಾಟ ಮಾಡಲು ಕಾಲಾವಕಾಶ ನೀಡಿ ಸರ್ಕಾರಕ್ಕೆ ಸೂಚನೆ ನೀಡಿದೆ.
ಅಲ್ಲದೇ ಆಸ್ತಿ ಮಾರಾಟಕ್ಕೆ ಅಡ್ಡಿಯಾಗುವ ಸ್ಥಳೀಯ ಹಾಗೂ ಬೇರೆ, ಬೇರೆ ನ್ಯಾಯಾಲಯಗಳ ಯಾವುದೇ ಆದೇಶವನ್ನು ಪರಿಗಣಿಸದಂತೆ ಆದೇಶ ನೀಡಿರುವ ಸುಪ್ರೀಂ ಪೀಠ, ಮೂರು ತಿಂಗಳ ಕಾಲಾವಕಾಶ ನೀಡಿ, ಈ ಅವಧಿಯೊಳಗೆ ಶಾಸ್ತ್ರಿಯ ಆಸ್ತಿಯನ್ನು ಸರ್ಕಾರ ಮಾರಾಟ ಮಾಡಿ ಮೋಸಕ್ಕೆ ಒಳಗಾದವರಿಗೆ ಹಣ ಮರುಪಾವತಿಸುವಂತೆ ಸೂಚನೆ ನೀಡಿದೆ.