ಬೆಂಗಳೂರಿನ ಕಾರ್ಲ್‌ಟನ್ ರಸ್ತೆಯಲ್ಲಿ ಮಂಗಳವಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು, 7 ಮಹಡಿಗಳುಳ್ಳ ಕಟ್ಟಡದೊಳಗೆ ಅಗ್ನಿ ದುರಂತದೊಂದಿಗೆ ದಟ್ಟ ಹೊಗೆ ಕಾಣಿಸಿಕೊಂಡ ಪರಿಣಾಮ, ಹೆದರಿ ಐದನೇ ಮಹಡಿಯಿಂದ ಹೊರಗೆ ಜಿಗಿದು ಮತ್ತು ದಟ್ಟ ಹೊಗೆಯಿಂದ ಉಸಿರುಗಟ್ಟಿ ಸಾವಿಗೀಡಾದವರ ಸಂಖ್ಯೆ 9ಕ್ಕೆ ತಲುಪಿದೆ. 15 ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದು, ಮೃತಪಟ್ಟವರ ಸಂಖ್ಯೆ ಹೆಚ್ಚಾಗುವ ಆತಂಕವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೊಮ್ಲೂರಿನ ಹಳೆ ವಿಮಾನನಿಲ್ದಾಣ ರಸ್ತೆಯ ಹಲವು ಐಟಿ ಕಂಪನಿಗಳ ಕಚೇರಿ ಹೊಂದಿರುವ ಈ ಕಟ್ಟಡದಲ್ಲಿ ಮಂಗಳವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ನಡೆದ ಈ ದುರಂತದಲ್ಲಿ ಮೃತಪಟ್ಟವರಲ್ಲಿ ಆರು ಪುರುಷರು ಹಾಗೂ ಮೂವರು ಮಹಿಳೆಯರು ಸೇರಿದ್ದಾರೆ ಎಂದು ಮಣಿಪಾಲ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಎಚ್.ಎಸ್. ಬಲ್ಲಾಳ್ ಹೇಳಿದ್ದಾರೆ.
ಆಸ್ಪತ್ರೆಗೆ ದಾಖಲಾದ ಇತರರ ಕುರಿತು ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯ ಹೆಲ್ಪ್ ಲೈನ್ ಸಂಖ್ಯೆ 080 -25024202 ಸಂಪರ್ಕಿಸಬಹುದಾಗಿದೆ.
ಮೃತಪಟ್ಟ ದುರ್ದೈವಿಗಳನ್ನು ಸುನಿಲ್ ಅಯ್ಯರ್, ಸವಿತಾ, ರಾಜೇಶ್ ಸುಬ್ರಹ್ಮಣ್ಯ, ಸುರಭಿ ಜೋಷಿ, ಅಖಿಲಾ, ಸಿದ್ಧಾರ್ಥ್ ಕದಂ, ಪುರೋಹಿತ್ ಮದನ್ ಸಿಂಗ್, ಬನ್ಸಿ ಕುಮಾರ್ ಹಾಗೂ ಫಯಾಜ್ ಪಾಶಾ ಎಂದು ಗುರುತಿಸಲಾಗಿದೆ. 59 ಮಂದಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, 15 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಅವರಲ್ಲಿ ಹೆಚ್ಚಿನವರು ಹೊಗೆಯಿಂದ ಉಸಿರುಕಟ್ಟಿದ್ದರಿಂದ ಮೃತಪಟ್ಟಿದ್ದರು. ಏಳು ಮಂದಿ ಆಸ್ಪತ್ರೆಗೆ ತರುವ ಮುನ್ನವೇ ಮೃತಪಟ್ಟಿದ್ದರು.
ಹಳೆ ಏರ್‌ಫೋರ್ಟ್ ರಸ್ತೆಯ ಇಂದಿರಾನಗರದ ಫ್ಲೈ ಓವರ್ ಸಮೀಪ ಇರುವ ಕಾರ್ಲ್‌ಟನ್ ಟವರ್ಸ್‌ನ ಆರು ಮತ್ತು ಏಳನೇ ಮಹಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದರಿಂದ ಕಟ್ಟಡದೊಳಗೆ ಕಾರ್ಯನಿರ್ವಹಿಸುತ್ತಿದ್ದ ಹಲವರು ಹೊಗೆಯಿಂದ ಅಸ್ವಸ್ಥಗೊಂಡಿದ್ದರು. ಕೆಲವರು ಪ್ರಾಣಭಯದಿಂದ ಏನು ಮಾಡಬೇಕೆಂದು ತೋಚದೆ, ಕಿಟಕಿ ಬಾಗಿಲುಗಳನ್ನು ಒಡೆದು ಕೆಳಗೆ ಹಾರಿದ್ದರು. ಬಹುತೇಕರನ್ನು ಅಗ್ನಿಶಾಮಕ ದಳದವರು ಹಾಗೂ ಸ್ಥಳೀಯರು ಸುರಕ್ಷಿತವಾಗಿ ಹೊರಕ್ಕೆ ತಂದು ಆಸ್ಪತ್ರೆಗೆ ಸೇರಿಸಿದ್ದಾರೆ.
ಕಟ್ಟಡದೊಳಗೆ ಹೊಗೆ ಕಾಣಿಸಿಕೊಂಡ ಪರಿಣಾಮ ಒಳಗಿದ್ದವರೆಲ್ಲರೂ ಕಿಟಕಿ ಗಾಜುಗಳನ್ನು ಕೈಗೆ ಸಿಕ್ಕಿದ ವಸ್ತುವಿನಿಂದ ಪುಡಿ ಮಾಡಿ, ಉಸಿರಾಟಕ್ಕಾಗಿ ಸ್ವಚ್ಛ ಗಾಳಿ ಒಳಗೆ ಬರುವಂತೆ ಮಾಡಿಕೊಳ್ಳುತ್ತಿದ್ದ ದೃಶ್ಯಗಳು ಕಾಣಿಸುತ್ತಿದ್ದವು.
ಅಸ್ವಸ್ಥಗೊಂಡವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದಟ್ಟವಾದ ಹೊಗೆ ತುಂಬಿಕೊಂಡಿದ್ದ ಕಾರಣ ಹೆದರಿದ ಕೆಲವರು ಏಳನೇ ಅಂತಸ್ತಿನಿಂದ ಕೆಳಕ್ಕೆ ಜಿಗಿದ ಕೆಲವರು ಸಾವನ್ನಪ್ಪಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೆಳಕ್ಕೆ ಜಿಗಿದ ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆಂದು ಗೃಹ ಸಚಿವ ವಿ.ಎಸ್.ಆಚಾರ್ಯ ತಿಳಿಸಿದ್ದಾರೆ.
ಘಟನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವೆಂದು ಹೇಳಲಾಗುತ್ತಿದ್ದು, ಕಟ್ಟಡವನ್ನು ಜನಮುಕ್ತಗೊಳಿಸಲಾಗಿದೆ.
ಕಾರ್ಲ್‌ಟನ್ ಟವರ್ಸ್‌ನೊಳಗೆ ಯೂಪ್ಪೈ ರೆಸ್ಟೋರೆಂಟ್, ಜಾವಾ ಗ್ರೀನ್ ಮತ್ತು ಬಾಂಬೆ ಪೋಸ್ಟ್ ರೆಸ್ಟೋರೆಂಟ್ ಸೇರಿದಂತೆ ಹಲವಾರು ವಾಣಿಜ್ಯ ಮಳಿಗೆಗಳಿವೆ. ಈ ಕಟ್ಟಡದಲ್ಲಿ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ. ತುರ್ತು ನಿರ್ಗಮನ ದ್ವಾರಗಳಿಗೂ ಯಾವುದೇ ರೀತಿಯಲ್ಲಿ ಗುರುತು ಮಾಡಲಾಗಿಲ್ಲ. ತುರ್ತು ನಿರ್ಗಮನ ದ್ವಾರ ಎಲ್ಲಿದೆ ಎಂಬುದೇ ಹೆಚ್ಚಿನವರಿಗೆ ಗೊತ್ತಿರಲಿಲ್ಲ ಹಾಗೂ ಅಗ್ನಿಶಾಮಕ ಉಪಕರಣಗಳ ಇರುವಿಕೆ ಮತ್ತು ಬಳಕೆಯ ಬಗೆಗೂ ಕಟ್ಟಡದೊಳಗಿರುವವರಿಗೆ ಯಾವುದೇ ಮಾಹಿತಿ ಇರಲಿಲ್ಲ. ಎಂದು ಅಧಿಕಾರಿಗಳು ಹೇಳಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ, ಈ ಅಗ್ನಿ ದುರಂತದ ಬಗ್ಗೆ ಕರ್ನಾಟಕ ಸರಕಾರವು ತನಿಖೆಗೆ ಆದೇಶಿಸಿದೆ. ಬಿಲ್ಡರ್‌ಗಳು ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆಯೇ ಎಂಬ ಕುರಿತಾಗಿಯೂ ತನಿಖೆ ನಡೆಸಲಾಗುತ್ತದೆ.
ಈ ಮಧ್ಯೆ, ಮೃತಪಟ್ಟವರ ಕುಟುಂಬಕ್ಕೆ ತತ್ ಕ್ಷಣದ ಪರಿಹಾರವಾಗಿ ತಲಾ 2 ಲಕ್ಷ ರೂ.ಗಳನ್ನು ಕರ್ನಾಟಕ ಸರಕಾರ ಘೋಷಿಸಿದ್ದು, ಅಸ್ವಸ್ಥರ ಚಿಕಿತ್ಸೆಯ ವೆಚ್ಚವನ್ನೂ ಭರಿಸುವುದಾಗಿ ಮೂಲಗಳು ಹೇಳಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳನ್ನು ವಿಚಾರಿಸಿ, ಪರಿಹಾರ ಘೋಷಿಸಿದ್ದಾರೆ.