ಕೆಂಪೇಗೌಡ ಬಡಾವಣೆ ನಿರ್ಮಾಣ ಸಂಬಂಧ ಬಿಡಿಎ ವಿರುದ್ಧ ತೀವ್ರ ಹೋರಾಟ ಆರಂಭಿಸಿರುವ ಕೊಡಿಗೇಹಳ್ಳಿ ಗ್ರಾಮಸ್ಥರ ಹೋರಾಟಕ್ಕೆ ಜೆಡಿಎಸ್ ಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದೆ.
ಸೋಮವಾರ ಗಲಾಟೆ ಸಂಭವಿಸಿದ ಪ್ರದೇಶಕ್ಕೆ ಭೇಟಿ ನೀಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಬೆಂಬಲ ನೀಡುವುದಾಗಿ ಪ್ರತಿಭಟನಾಕಾರರಿಗೆ ಅಭಯ ನೀಡಿದ್ದಾರೆ.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಬಿಡಿಎ ಅಧಿಕಾರಿಗಳು ತರಾತುರಿಯಲ್ಲಿ ಜಮೀನು ಸರ್ವೇ ಸ್ವಾಧೀನಕ್ಕೆ ಕೈ ಹಾಕಿ ಮುಠ್ಠಾಳ ಕೆಲಸ ಮಾಡಿಬಿಟ್ಟಿದ್ದಾರೆ. ಅಧಿಕಾರಿಗಳು ಜನರ ಬಳಿ ಹಣಕ್ಕೆ ಒತ್ತಾಯ ಮಾಡಿದ ಪರಿಣಾಮ ಗ್ರಾಮದ ಜನತೆ ರೊಚ್ಚಿಗೆದ್ದಿದ್ದಾರೆ. ಇದಕ್ಕೆಲ್ಲ ಅಧಿಕಾರಿಗಳ ಹೊಣೆಗೇಡಿತನವೇ ಕಾರಣ ಎಂದು ದೂರಿದರು.