ರೈತರ ಪರ ಹೋರಾಟವನ್ನು ಮುಂದುವರಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿಗಳೇ ಪೊಲೀಸ್ ಬೆಂಬಲದಿಂದ ರೈತರ ಜಮೀನು ಕಿತ್ಕೊಂಡು ಪ್ರಾಣ ತೆಗೀಬೇಕು ಅಂದ್ಕೊಂಡಿದ್ದೀರಾ?ಈ ಗೌಡನ ಕೊನೆ ಉಸಿರು ಇರುವವರೆಗೆ ಅದು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ನೈಸ್ ಯೋಜನೆ ಅನ್ಯಾಯಗಳ ವಿರುದ್ಧ ಭೂಸ್ವಾಧೀನ ವಿರೋಧಿ ವೇದಿಕೆ ಮಾದಾವರದಲ್ಲಿ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು ಸಿಎಂ ಯಡಿಯೂರಪ್ಪ ವಿರುದ್ಧ ಎಂದಿನಂತೆ ತಮ್ಮ ವಾಗ್ದಾಳಿಯನ್ನು ನಡೆಸಿದರು.
ಗೌಡ ಸರ್ಕಾರದ ಅಭಿವೃದ್ಧಿಗೆ ವಿಘ್ನ, ಸರ್ಕಾರ ಪತನಗೊಳಿಸೋಕೆ ಹೋಗ್ತಾ ಇದ್ದಾನೆ ಅಂತೀರಲ್ಲಾ?ರೈತ ವಿರೋಧಿ ಸರ್ಕಾರ ಬೇಕೇನ್ರಿ ನಮಗೆ ಎಂದು ರೈತರನ್ನು ಪ್ರಶ್ನಿಸಿದರು.
ನನ್ನ ಕೊನೆ ಉಸಿರು ಇರೋ ತನಕ ಹೋರಾಡ್ತೇನೆ. ನಾನು ಹೋದ ಮೇಲೆ ಇದರ ಜವಾಬ್ದಾರಿ ಕುಮಾರಸ್ವಾಮಿಗೆ ಬಿಟ್ಟಿದ್ದೇನೆ. ರೈತರ ಕಣ್ಣೀರು ಒರೆಸುವುದು ನನ್ನ ಕರ್ತವ್ಯ. ಈ ಇಳಿವಯಸ್ಸಿನಲ್ಲಿ ನಾನು ಹೋರಾಟ ಮಾಡ್ತಿರೋದು ನಮ್ಮ ಭೂಮಿ ಅಂತಲ್ಲ. ನಿಮ್ಮ ಭೂಮಿ ಅಂತ. ಆ ನಿಟ್ಟಿನಲ್ಲಿ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಲೇಬೇಕು ಎಂದು ಈ ಸಂದರ್ಭದಲ್ಲಿ ಕರೆ ನೀಡಿದರು.