ಜನತೆಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಶ್ರಮಿಸುತ್ತಿದ್ದು, ರಾಜ್ಯದಲ್ಲಿ ಭಯೋತ್ಪಾದಕ, ನಕ್ಸಲ್ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ. ಏತನ್ಮಧ್ಯೆ ಕರ್ನಾಟಕ-ತಮಿಳುನಾಡು ಮಧ್ಯೆ ಸೌಹಾರ್ದ ಯುಗ ಆರಂಭವಾಗಿರುವುದಾಗಿ ಗುರುವಾರ ಆರಂಭಗೊಂಡ ರಾಜ್ಯ ವಿಧಾನಮಂಡಲದ ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮಾತನಾಡಿದರು.
ಪ್ರವಾಹದಿಂದಾಗಿ ಸುಮಾರು 18ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಆ ನಿಟ್ಟಿನಲ್ಲಿ ನೆರೆ ಪರಿಹಾರಕ್ಕೆ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ, ನೆರೆ ಪರಿಹಾರಕ್ಕಾಗಿ ಕೇಂದ್ರದಿಂದ 1457ಕೋಟಿ ರೂ.ನೆರವು ಹರಿದು ಬಂದಿದೆ ಎಂದು ಹೇಳಿದರು.
ಆರಂಭಿಕವಾಗಿ ರಾಜ್ಯಪಾಲರು ಕನ್ನಡದಲ್ಲಿ ಭಾಷಣ ಆರಂಭಿಸಿ, ನಂತರ ಇಂಗ್ಲಿಷ್‌ನಲ್ಲಿ ಮುಂದುವರಿಸಿ 31ಪುಟಗಳ ಮುದ್ರಿತ ಭಾಷಣವನ್ನು 45ನಿಮಿಷಗಳಲ್ಲಿ ಓದಿ ಮುಗಿಸಿದರು.
ರೈತರ ಕಲ್ಯಾಣಕ್ಕೆ ಸರ್ಕಾರ ಬದ್ದ: ಸಮಾಜದ ಬೆನ್ನೆಲುಬಾದ ರೈತರ ಏಳಿಗೆಗಾಗಿ ಸರ್ಕಾರ ಕಂಕಣಬದ್ಧವಾಗಿದೆ. ಉತ್ತರ ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಆದ್ಯತೆ ನೀಡಲಾಗಿದೆ ಎಂದರು. ನಿಧಾನಗತಿಯಲ್ಲಿ ನಡೆಯುತ್ತಿರುವ 14ನೀರಾವರಿ ಯೋಜನೆಗಳನ್ನು ಶೀಘ್ರವೇ ಪೂರ್ಣಗೊಳಿಸಿ, ಕೃಷ್ಣಾ ಮತ್ತು ಕಾವೇರಿ ನದಿ ನೀರಿನ ಉತ್ತಮ ಬಳಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಅಕ್ಕಿ ಸಂತೆ: ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಅಕ್ಕಿಯನ್ನು ಒದಗಿಸಲು ಹಾಗೂ ಮುಕ್ತ ಮಾರುಕಟ್ಟೆಯಲ್ಲಿ ಹಣದುಬ್ಬರ ನಿಯಂತ್ರಿಸಲು ಅಕ್ಕಿಸಂತೆಗಳನ್ನು ಏರ್ಪಡಿಸಲಾಗುತ್ತದೆ. ಸಾರ್ವಜನಿಕ ವಿತರಣೆ ವ್ಯವಸ್ಥೆ ದೋಷರಹಿತವಾಗಿಸಲು ಮಾರಾಟ ಮಳಿಗೆಗಳಲ್ಲಿ ಧ್ವನಿ ಇಂಟರ್‌ಫೇಸ್ ಹೊಂದಿದ ಬಯೋಮೆಟ್ರಿಕ್ ಸಾಧನಗಳ ಪೂರೈಕೆಗೆ ಯೋಜನೆ ಮುಂದುವರಿಸಲಾಗುವುದು ಎಂದರು.
ಆರೋಗ್ಯ ಸೇವೆ: ರಾಜ್ಯದ ಜನತೆಗೆ ಅದರಲ್ಲೂ ಬಡವರಿಗಾಗಿ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಅನೇಕ ಸಕ್ರಿಯ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಲಾಗುತ್ತಿದೆ ಎಂದು ರಾಜ್ಯಪಾಲರು ಹೇಳಿದರು.
ಕಾನೂನು ಕೋಶ: ನ್ಯಾಯಾಲಯಗಳಲ್ಲಿ ಬಹುದಿನಗಳಿಂದ ಬಾಕಿಯಿರುವ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾನೂನು ಕೋಶಗಳನ್ನು ರಚಿಸಲಾಗುವುದು ಎಂದರು.