ಉತ್ತರ ಕರ್ನಾಟಕ ನೆರೆ ಸಂತ್ರಸ್ಥರಿಗೆ ಮಾಡಿರುವ ತಾತ್ಕಾಲಿಕ ಟೆಂಟ್ ವ್ಯವಸ್ಥೆ ಮನುಷ್ಯರು ಬದುಕಲು ಯೋಗ್ಯವಾಗಿಲ್ಲ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ ಮೋಟಮ್ಮ ಆರೋಪಿಸಿದ್ದಾರೆ.
ಇತ್ತೀಚೆಗೆ ಬಾಗಲಕೋಟೆಯ ಕೆಲವು ಗ್ರಾಮಗಳಿಗೆ ಭೇಟಿ ನೀಡಿದ ಮೋಟಮ್ಮ ಅಲ್ಲಿನ ಪರಿಸ್ಥಿತಿಗಳನ್ನು ಕಂಡು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಇಲ್ಲಿನ ಇಂಗಳಗಿ ಗ್ರಾಮದ 120 ತಾತ್ಕಾಲಿಕ ಶಿಬಿರಗಳ ಸಣ್ಣ ಷೆಡ್‌ಗಳಲ್ಲಿ ಜನರು ಜೀವನ ಸಾಗಿಸದಂತಾಗಿದೆ. ನೆಲ ಮಟ್ಟಸ ಮಾಡದೆ ಕಲ್ಲುಗಳನ್ನು ತೆಗೆಯದೇ ಟೆಂಟ್ ನಿರ್ಮಿಸಿದ್ದು, ಅಲ್ಲಿ ವಾಸಿಸುವವರ ಬದುಕು ನರಕಸದೃಶವಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ದೂರಿದರು.
ಈ ಪ್ರದೇಶಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಪರಿಹಾರ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗಿದೆ. ಬೇಕಾದಷ್ಟು ದೇಣಿಗೆ ಬಂದಿದ್ದರೂ ನೆರೆಪರಿಹಾರಕ್ಕೆ ಸಮರ್ಪಕವಾಗಿ ಕೆಲಸ ಮಾಡಿಲ್ಲ ಎಂದ ಮೋಟಮ್ಮ, ದೇಣಿಗೆ ಹಣ ಹೇಗೆ ವೆಚ್ಚವಾಗಿದೆ ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ಸಾರ್ವಜನಿಕರಿಗೆ ಲೆಕ್ಕ ನೀಡಬೇಕು ಎಂದು ಆಗ್ರಹಿಸಿದರು.