ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರ ಮಂಡಿಸಿದ್ದ ಬಜೆಟ್ ತೃಪ್ತಿದಾಯಕವಾಗಿಲ್ಲ, ಇದು ಬಡವರ ವಿರೋಧಿ ಬಜೆಟ್ ಆಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.
ಶುಕ್ರವಾರ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರು ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಕೇಂದ್ರದ ಬಜೆಟ್ ಬಡವರ, ಶ್ರೀಸಾಮಾನ್ಯರ ವಿರೋಧಿಯಾಗಿದೆ ಎಂದರು. ಅಲ್ಲದೇ ರಾಜ್ಯಕ್ಕೆ ಯಾವುದೇ ವಿಶೇಷ ಕೊಡುಗೆ ಇಲ್ಲ. ಆದರೂ ಕೆಲವೊಂದು ನಿರ್ಧಾರಗಳು ಸ್ವಾಗತಾರ್ಹ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೇಂದ್ರದ ಬಜೆಟ್‌ನಿಂದ ಹಣದುಬ್ಬರ ಮತ್ತಷ್ಟು ಏರಿಕೆಯಾಗುವುದಾಗಿ ಅವರು ಆತಂಕ ವ್ಯಕ್ತಪಡಿಸಿದರು. ಇದರಿಂದಾಗಿ ವಿತ್ತೀಯ ಕೊರತೆ ಹೆಚ್ಚಳ ಕೇಂದ್ರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.
ನೆರೆ ಪ್ರದೇಶದ ರೈತರ ಸಾಲ ಮನ್ನಾ ಮಾಡಿಲ್ಲ ಎಂದು ದೂರಿದ್ದು, ಕೇಂದ್ರದ ಶೇ.5ರ ಬಡ್ಡಿದರದಲ್ಲಿ ಕೃಷಿ ಸಾಲ ನೀಡುವ ನೀತಿಯನ್ನು ಲೇವಡಿ ಮಾಡಿದರು. ರಾಜ್ಯ ಸರ್ಕಾರವೇ ರೈತರಿಗೆ ಶೇ.3ರ ಬಡ್ಡಿದರದಲ್ಲಿ ಕೃಷಿ ಸಾಲ ನೀಡುತ್ತಿದೆ ಎಂದು ತಿಳಿಸಿದರು.