ಮಾಜಿ ಪ್ರಧಾನಿ ದೇವೇಗೌಡರು ರೈತ ಪರವಾಗಿ ರಾಜ್ಯಾದ್ಯಂತ ಹೋರಾಟ ಮಾಡುವ ಮೂಲಕ ಜೆಡಿಎಸ್ ಪಕ್ಷವನ್ನು ಪ್ರವರ್ಧಮಾನಕ್ಕೆ ತರುತ್ತಿದ್ದಾರೆಂದು ಕಳವಳಗೊಂಡ ಕಾಂಗ್ರೆಸ್ ಪಕ್ಷ ತಾನು ಕೂಡ ನೈಸ್ ವಿರುದ್ಧ ಹೋರಾಟಕ್ಕಿಳಿಯಲು ನಿರ್ಧರಿಸಿದೆ.
ನೈಸ್ ಯೋಜನೆ ನೆಪದಲ್ಲಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುತ್ತಿರುವ ಸರ್ಕಾರದ ವಿರುದ್ಧ ಗೌಡರು ಹೋರಾಟಕ್ಕಿಳಿದಿದ್ದಾರೆ. ಆದರೆ, ಕಾಂಗ್ರೆಸ್ ಕೈಕಟ್ಟಿ ಕುಳಿತುಕೊಂಡಿದೆ ಎಂಬ ಸಾರ್ವಜನಿಕರ ಆಕ್ಷೇಪಣೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮೈ ಕೊಡವಿಕೊಂಡು ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲು ನಿರ್ಧರಿಸಿದೆ.
ಮಾರ್ಚ್ 6ರಂದು ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲು ತಯಾರಿ ನಡೆಸಿದೆ. ಈ ಬಗ್ಗೆ ಆರ್. ವಿ. ದೇಶಪಾಂಡೆ ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಂಡಿದ್ದಾರೆ.