ದೊಡ್ಡಬಳ್ಳಾಪುರ, ಶನಿವಾರ, 27 ಫೆಬ್ರವರಿ 2010( 09:43 IST )
ಗೋ ಹತ್ಯೆ ನಿಷೇಧ ಕುರಿತಂತೆ ರಾಜ್ಯ ಸರ್ಕಾರದ ನಿಲುವಿನ ವಿರುದ್ಧ ಕಿಡಿಕಾರಿರುವ ಹಲವು ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ, ದನದ ಮಾಂಸ ಸೇವನೆ ನಮ್ಮ ಹಕ್ಕು ಎಂದು ಪ್ರತಿಪಾದಿಸಿ ತಾಲೂಕು ಕಚೇರಿಯ ಮುಂದೆ ಗೋ ಮಾಂಸದ ಅಡುಗೆ ಉಂಡು ಪ್ರತಿಭಟನೆ ನಡೆಸಿದವು.
ದಲಿತರ ಸಬಲೀಕರಣಕ್ಕೆ ಒತ್ತಾಯಿಸಿ ರಾಜ್ಯದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಶುಕ್ರವಾರದಿಂದ ಆರಂಭವಾದ ಅನಿರ್ದಿಷ್ಟಾವಧಿ ಧರಣಿಯ ಮೊದಲ ದಿನವೇ ಈ ವಿಶಿಷ್ಟ ರೀತಿಯ ಪ್ರತಿಭಟನೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ದೇಶದ ಸಂಸ್ಕೃತಿ, ಮೌಲ್ಯಗಳ ಬಗ್ಗೆ ಮಾತನಾಡುವ ಸಂಘಪರಿವಾರ, ಬಿಜೆಪಿ ಮೊದಲು ಇಲ್ಲಿನ ಜನರ ಬದುಕಿನ ರೀತಿ-ರಿವಾಜುಗಳ ಬಗ್ಗೆಯೂ ಆಲೋಚಿಸಬೇಕು. ಕೇವಲ ಮನುವಾದಿ ಅಜೆಂಡಾವನ್ನು ಜಾರಿಗೊಳಿಸುವ ತರಾತುರಿಯಲ್ಲಿ ಹಿಂದುಳಿದ ವರ್ಗಗಳ ಆಶಯಗಳನ್ನು ದಮನ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿವೆ.
ಮನುವಾದಿ ಸಂಸ್ಕೃತಿಯ ಮೂಲಕ ಗೋವಿನ ಹೆಸರಲ್ಲಿ ರಾಜಕಾರಣ ಮಾಡುತ್ತಿರುವುದಾಗಿ ದಲಿತ ಸಂಘಟನೆಗಳು ಗಂಭೀರವಾಗಿ ಆರೋಪಿಸಿವೆ.ಭಾರತ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ದೇಶ. ಇಲ್ಲಿ ಯಾರೊಬ್ಬರ ಜೀವನ ಕ್ರಮ ಮತ್ತು ಆಹಾರ ಕ್ರಮದ ಕುರಿತು ಪ್ರಶ್ನಿಸಲು ಯಾರಿಗೂ ಹಕ್ಕಿಲ್ಲ ಎಂದು ಗುಡುಗಿದೆ.