ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ 68ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಸಂಜಯ ನಗರದ ರಾಧಾಕೃಷ್ಣ ದೇವಾಲಯಕ್ಕೆ ಕುಟುಂಬ ವರ್ಗದವರೊಡನೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಪೂಜೆ ಸಲ್ಲಿಕೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರು ನೆಮ್ಮದಿ, ಸೌಹಾರ್ದತೆಯಿಂದ ಬಾಳಲು ಅವಕಾಶ ಮಾಡಿಕೊಡುವಂತಹ ಆಡಳಿತ ನಡೆಸುವ ಶಕ್ತಿ ಭಗವಂತ ನೀಡಲಿ ಎಂದು ಈ ಸಂದರ್ಭದಲ್ಲಿ ಹೇಳಿದರು.
ಉತ್ತಮ ಆಡಳಿತವನ್ನು ನೀಡುವ ಮೂಲಕ ರಾಜ್ಯದ ಜನರ ಅಪೇಕ್ಷೆಯನ್ನು ಈಡೇರಿಸುವ ಇಚ್ಚೆ ಹೊಂದಿರುವುದಾಗಿ ಹೇಳಿದ ಅವರು, ಭಗವಂತ ಇನ್ನಷ್ಟು ಚೈತನ್ಯ ಕರುಣಿಸಲಿ ಎಂದರು.
ಅಲ್ಲದೇ ಮಾರ್ಚ್ 5ರಂದು ಮಂಡಿಸಲಿರುವ ಬಜೆಟ್ ಜನಪರವಾಗಿರುವುದಾಗಿ ಹೇಳಿದರು. 68ನೇ ಹುಟ್ಟು ಹಬ್ಬ ಆಚರಿಸಿಕೊಂಡ ಸಂದರ್ಭದಲ್ಲಿ ಪುತ್ರ ಬಿ.ವೈ.ರಾಘವೇಂದ್ರ ಹಾಗೂ ಕುಟುಂಬದ ಸದಸ್ಯರು, ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಸಚಿವ ಸಂಪುಟದ ಸಹೋದ್ಯೋಗಿಗಳು ಹಾಜರಿದ್ದರು.