ಕೇಂದ್ರ ಸರ್ಕಾರದ 2010-11ನೇ ಸಾಲಿನ ಬಜೆಟ್‌ನಲ್ಲಿ ಆರ್ಥಿಕ ಪ್ರಗತಿಗೆ ಪೂರಕವಾದ, ಜನಸಾಮಾನ್ಯರ ಕಲ್ಯಾಣಕ್ಕೆ ಒತ್ತು ನೀಡುವ ಮುಂಗಡಪತ್ರ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿ ಅವರು ಆಹಾರ ಭದ್ರತೆಗಾಗಿ ಕೈಗೊಂಡಿರುವ ಕ್ರಮಗಳು ಸ್ವಾಗತಾರ್ಹ. ಅಲ್ಲದೆ, ಸಾಮಾಜಿಕ ವಲಯ ಹಾಗೂ ಗ್ರಾಮೀಣಾಭಿವೃದ್ದಿಗೆ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ರಸ್ತೆ, ಕುಡಿಯುವ ನೀರು, ರೈಲ್ವೆ ಯೋಜನೆಗಳು ಸೇರಿದಂತೆ ಮೂಲ ಸೌಕರ್ಯ ಅಭಿವೃದ್ದಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಪ್ರಶಂಸಿಸಿದರು.
ಯೋಜನಾ ಗಾತ್ರ ಮತ್ತು ವೆಚ್ಚ ಎರಡೂ ಹೆಚ್ಚಿವೆ. ಯೋಜನೇತರ ವೆಚ್ಚ ಕಡಿತ ಮಾಡಿರುವುದು ಒಳ್ಳೆಯ ಬೆಳವಣಿಗೆ. ವಿತ್ತೀಯ ಕೊರತೆಯನ್ನು ಶೇ.6.8ರಿಂದ ಶೇ5.5ಕ್ಕೆ ಇಳಿಸುವ ಆಶಯ ಸೂಕ್ತವಾಗಿದೆ ಎಂದಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆಯನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಕೇಂದ್ರ ಬಜೆಟ್‌ನಲ್ಲಿ ಸ್ಪಷ್ಟವಾಗಿದೆ ಎಂದರು.