ಹಂಪಿ ಕನ್ನಡ ವಿಶ್ವವಿದ್ಯಾಲಯದ ಬೆಳವಣಿಗೆಗೆಂದು ಮೀಸಲಿಟ್ಟ ಭೂಮಿಯನ್ನು ಯಾವುದೋ ನೆಪವೊಡ್ಡಿ ಭೂಗಳ್ಳರಿಗೆ ನೀಡಲು ವಿಶ್ವವಿದ್ಯಾಲಯ ನಿರ್ಧರಿಸಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅತ್ಯಂತ ಅಮೂಲ್ಯವಾದ ಹಾಗೂ ಬೆಲೆ ಕಟ್ಟಲು ಅಸಾಧ್ಯವಾದ ಈ ಭೂಮಿಯನ್ನು ಬೇರೆಯವರಿಗೆ ಹಸ್ತಾಂತರಿಸಲು ಹೊರಟಿರುವ ಸರ್ಕಾರದ ನಿರ್ಧಾರ ಸರಿಯಲ್ಲ ಎಂದಿದ್ದಾರೆ.
ಈ ಬಗ್ಗೆ ತಮ್ಮಂತೆ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ ಪಡೆದವರೆಲ್ಲರೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಭೂಮಿಯ ಹಸ್ತಾಂತರ ಮಾಡಬಾರದು ಎಂದು ಒತ್ತಾಯಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಇದು ಕನ್ನಡದ ಬೆಳವಣಿಗೆಗೆ ದ್ರೋಹ ಎಸಗುವ ಸಂಚು ಎಂದಿರುವ ಅವರು, ಈ ಪವಿತ್ರ ಜಾಗವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇದನ್ನು ಕನ್ನಡಿಗರೆಲ್ಲ ಖಂಡಿಸಬೇಕೆಂದು ಕರೆ ನೀಡಿದ್ದಾರೆ.