ರೈಲ್ವೆ ಬಜೆಟ್‌ನಲ್ಲಿ ಈಗಾಗಲೇ ಪ್ರಕಟಿಸಿರುವಂತೆ ರಾಜ್ಯದ ಪರ ಯೋಜನೆಗಳಾದ 12 ಹೊಸ ರೈಲು ಮಾರ್ಗಗಳ ಸಮೀಕ್ಷಾ ಕಾರ್ಯವನ್ನು ಆರು ತಿಂಗಳೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದು ರೇಲ್ವೆ ಖಾತೆಯ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರೇಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರು ಪ್ರಕಟಿಸಿರುವ ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಆರು ತಿಂಗಳೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದರು.
ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ರೇಲ್ವೆ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಕರ್ನಾಟಕ ಹಾಗೂ ಆಂಧ್ರ ಸರ್ಕಾರಗಳು ಆಸಕ್ತಿ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ 2, 500 ಕೋಟಿ ರೂಪಾಯಿಗಳ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟ ನೀತಿ ರೂಪಿಸಿಲ್ಲ ಎಂದು ಮುನಿಯಪ್ಪ ತಿಳಿಸಿದರು.
ಈ ವರ್ಷದ ಬಜೆಟ್‌ನಲ್ಲಿ ರಾಜ್ಯಕ್ಕೆ 1,460 ಕೋಟಿ ರೂಪಾಯಿಗಳ ಮೊತ್ತದ ಯೋಜನೆಗಳು ಲಭ್ಯವಾಗಿವೆ ಎಂದ ಅವರು, ಕಳೆದ ವರ್ಷದ ಬಜೆಟ್‌ನಲ್ಲಿ ನೀಡಿದ್ದ ರವಸೆ ಪೈಕಿ ಎರಡು ಹೊಸರೈಲು ಸಂಚಾರಕ್ಕೆ ಇನ್ನೂ ಚಾಲನೆ ದೊರೆತಿಲ್ಲ. ಮುಂಬೈ- ಕಾರವಾರ ರೈಲನ್ನು ಶೀಘ್ರದಲ್ಲಿ ಮಂಗಳೂರಿನವರೆಗೆ ವಿಸ್ತರಿಸಲಾಗುತ್ತದೆ. ಕಳೆದ ವರ್ಷದ ಭರವಸೆಗಳು ಪೂರ್ಣಗೊಂಡ ತಕ್ಷಣ ಹೊಸ ಯೋಜನೆಗಳು ಚಾಲನೆಗೊಳ್ಳಲಿವೆ ಎಂದು ಮುನಿಯಪ್ಪ ತಿಳಿಸಿದರು.
ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ರೈಲು ಮಾರ್ಗಗಳನ್ನು ನಿರ್ಮಿಸುವ ಉದ್ದೇಶವಿದೆ. ಇದಕ್ಕೆ ಪರಿಸರ ಹಾಗೂ ಅರಣ್ಯ ಇಲಾಖೆಗಳು ಅನುಮತಿ ನೀಡುವ ವಿಶ್ವಾಸವಿದೆ. ಕರಾವಳಿ, ಪಶ್ಚಿಮ ಘಟ್ಟ ಸೇರಿದಂತೆ ರಾಜ್ಯದ ಸೂಕ್ಷ್ಮ ಪರಿಸರ ಪ್ರದೇಶಗಳಲ್ಲಿ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೂಲಂಕುಷವಾಗಿ ಚರ್ಚೆ ನಡೆಸಿ, ಸಲಹೆಗಳನ್ನು ಸ್ವೀಕರಿಸಿ ಮುಂದುವರಿಯಲಾಗುತ್ತದೆ ಎಂದು ಅವರು ತಿಳಿಸಿದರು.