ಸುಗಮ ಸಂಗೀತ ಕ್ಷೇತ್ರದ ಗಾಯಕಿಯರ ನಡುವೆ ನಾಲ್ಕು ವರ್ಷದಿಂದ ನಡೆಯುತ್ತಿದ್ದ ಆಂತರಿಕ ಕಲಹ ಈಗ ತೀವ್ರಗೊಂಡು ಬಹಿರಂಗಗೊಂಡಿದೆ. ಕನ್ನಡ ಸುಗಮ ಸಂಗೀತ ಕ್ಷೇತ್ರದ ಹಿರಿಯ ಗಾಯಕಿಯರಾದ ರತ್ನಮಾಲಾ ಪ್ರಕಾಶ್, ಸಂಗೀತಾ ಕಟ್ಟಿ ಹಾಗೂ ಬಿ.ಆರ್. ಛಾಯಾರ ಹಾಡುಗಳನ್ನು ಯಥಾಸ್ಥಿತಿಯಲ್ಲಿ ಹಾಡಿದ್ದಾರೆಂದು ಆರೋಪಿಸಿ ಈ ಹಿರಿಯ ಗಾಯಕಿಯರು ಭರವಸೆಯ ಗಾಯಕಿ ಎಂ.ಡಿ. ಪಲ್ಲವಿ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಎಂ.ಡಿ. ಪಲ್ಲವಿಯವರು ತಮ್ಮ ಹಾಡುಗಳಲ್ಲಿ ಆಯ್ದ 50 ಗೀತೆಗಳ ಧ್ವನಿಸುರುಳಿ ಸಂಗೀತ ಸಾಗರ್ ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಸಮಾರಂಭಗಳಲ್ಲಿ ಹಾಡುತ್ತಿದ್ದ ಮೂಲರಾಗಗಳ ಈ ಹಾಡುಗಳು ಸಂಗೀತ ಸಾಗರ್ ಸಂಸ್ಥೆಯಡಿ ಮರು ಮುದ್ರಣಗೊಂಡು ಕೆಯಾಸೆಟ್ ರೂಪದಲ್ಲಿ ಹೊರಬರುತ್ತಿದೆ. ಆದರೆ ಈ ಹಾಡುಗಳ ಹಕ್ಕುಗಳೆಲ್ಲವೂ ಲಹರಿ ಕಂಪನಿಗೆ ಸೇರಿದ್ದಾಗಿದ್ದು, ಇದಕ್ಕಾಗಿ ರತ್ನಮಾಲಾ ಪ್ರಕಾಶ್, ಸಂಗೀತಾ ಕಟ್ಟಿ, ಛಾಯಾ ಸೇರಿದಂತೆ ಹಿರಿಯ ಗಾಯಕಿಯರು ಹಾಡಿದ್ದರು. ಈಗ ಮತ್ತೆ ಅದೇ ಹಾಡುಗಳು ಯಾವುದೇ ಅನುಮತಿಯಿಲ್ಲದೆ ಕ್ಯಾಸೆಟ್ ರೂಪದಲ್ಲಿ ಸಂಗೀತಸಾಗರ್ ಕಂಪನಿಯಡಿ ಹೊರಬರುತ್ತಿರುವುದಕ್ಕೆ ಹಿರಿಯ ಗಾಯಕಿಯರು ಅಪಸ್ವರವೆತ್ತಿದ್ದಾರೆ. ಅಷ್ಟೇ ಅಲ್ಲ, ಇದನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಅವರುಗಳು ಆಗ್ರಹಿಸಿದ್ದಾರೆ.
ತಮ್ಮ ಪರವಾನಗಿ ಪಡೆಯದೆ ಮೂಲ ಸ್ವರಸಂಯೋಜನೆಯಲ್ಲೇ ಪಲ್ಲವಿ ಹಾಡುತ್ತಾ ಬಂದಿದ್ದಾರೆ. ಈ ಮೂಲಕ ಮೂಲ ಗಾಯಕರನ್ನು ಕಡೆಗೆಣಿಸಿದ್ದಾರೆ ಎಂದು ಆರೋಪಿಸಿರುವ ಗಾಯಕಿಯರು, ಕೂಡಲೇ ಇದನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದ್ದಾರೆ.
ಈ ವಿಷಯವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಯತ್ನಿಸಿದ್ದೇವೆ. ಆದರೆ ಇದಕ್ಕೆ ಪಲ್ಲವಿಯವರು ಸೂಕ್ತವಾಗಿ ಸ್ಪಂದಿಸಿಲ್ಲ. ಇದೀಗ ಅನಿವಾರ್ಯವಾಗಿ ಈ ಮಾರ್ಗ ಹಿಡಿಯಬೇಕಾಯಿತು ಎಂದು ರತ್ನಮಾಲಾ ಪ್ರಕಾಶ್ ದೂರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಲಹರಿ ಸಂಸ್ಥೆಯ ಮುಖ್ಯಸ್ಥ ವೇಲು, ಮೂಲ ಸ್ವರ ಸಂಯೋಜನೆಯ ಗೀತೆಗಳು ಲಹರಿಯ ಹೆಸರಿನಲ್ಲಿದೆ. ಪಲ್ಲವಿ ತಕ್ಷಣ ಸಿ.ಡಿ. ಹಿಂದಕ್ಕೆ ಪಡೆಯದಿದ್ದಲ್ಲಿ, ಕಾನೂನಿನ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದಾರೆ.