ಯಡಿಯೂರಪ್ಪ ನಿರೀಕ್ಷೆ ಇಲ್ಲದ ವ್ಯಕ್ತಿ: ಸಿದ್ದರಾಮಯ್ಯ ಟೀಕೆ
ಭದ್ರಾವತಿ, ಸೋಮವಾರ, 1 ಮಾರ್ಚ್ 2010( 11:27 IST )
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರೀಕ್ಷೆ ಇಲ್ಲದ ವ್ಯಕ್ತಿ. ಅಂತಹ ಮನುಷ್ಯನಿಂದ ಏನು ನಿರೀಕ್ಷೆ ಮಾಡಬಹುದು. ಜನವಿರೋಧಿ ಬಜೆಟ್ ನೀಡುವ ಸರ್ಕಾರ ಎಂಬುದನ್ನು ಜಸಸಾಮಾನ್ಯರೇ ಕುಹಕವಾಡುತ್ತಿರುವಾಗ ನಾವು ಏನನ್ನೂ ನಿರೀಕ್ಷಿಸುವುದು ಸಮಂಜಸವಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಭಾನುವಾರ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಪರಿ ಇದು. ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಜನಪರವಾಗಿದ್ದು, ಆಡಳಿತಾರೂಢ ಬಿಜೆಪಿ ಪಕ್ಷ ಅನಾವಶ್ಯಕವಾಗಿ ಟೀಕಿಸುತ್ತಿದೆ. ಆ ನೆಲೆಯಲ್ಲಿ ರಾಜ್ಯ ಸರ್ಕಾರ ಎಷ್ಟು ಜನಪರವಾದ ಬಜೆಟ್ ನೀಡುತ್ತೇ ಎಂಬುದನ್ನು ಕಾದು ನೋಡುವಾ ಎಂದರು.
ಅಲ್ಲದೇ, ಗೋಹತ್ಯೆ ನಿಷೇಧ ಕಾಯ್ದೆ ಈಗಾಗಲೇ ಜಾರಿಯಲ್ಲಿದ್ದು, ಅದಕ್ಕೆ ಮತ್ತಷ್ಟು ತಿದ್ದುಪಡಿ ತರುವ ಹುನ್ನಾರದಲ್ಲಿ ಸರ್ಕಾರ ಬಹುಸಂಖ್ಯಾತ ಜನರ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕೇವಲ ಅಲ್ಪಸಂಖ್ಯಾತರನ್ನು ಪ್ರಮುಖ ಗುರಿಯಾಗಿಟ್ಟುಕೊಂಡು ತರುತ್ತಿರುವ ತಿದ್ದುಪಡಿ ಹಿಂದೆ ಸಂಘ ಪರಿವಾರದ ರಹಸ್ಯ ಅಜೆಂಡಾ ಇದೆ ಎಂದು ಕಿಡಿಕಾರಿದರು.