ಬಿಬಿಎಂಪಿ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಉದ್ದೇಶಿತ ಕೆಂಪೇಗೌಡ ಬಡಾವಣೆ ಯೋಜನೆ ವಿರುದ್ಧ ಹೋರಾಟ ನಡೆಸುತ್ತಿವೆ ಎಂದು ವಸತಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಆರೋಪಿಸಿದ್ದಾರೆ.
ಈ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿರ್ಣಯ ಸ್ವೀಕಾರ ಮತ್ತು ಅಧಿಸೂಚನೆ ಪ್ರಕಟಿಸುವ ಕಾರ್ಯವನ್ನು ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೇ ನಡೆಸಲಾಗಿತ್ತು. ಆದರೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸತ್ಯವನ್ನು ಮರೆಮಾಚಿ ಬಡಾವಣೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ದೂರಿದರು.
ಹಿಂದೆ ಅರ್ಕಾವತಿ ಬಡಾವಣೆ ನಿರ್ಮಾಣದ ಸಂದರ್ಭದಲ್ಲೂ ಅದಕ್ಕೆ ಅಡ್ಡಗಾಲು ಹಾಕಿದ ಗೌಡರು ನಗರದ ನಾಗರಿಕರು ನಿವೇಶನ ವಂಚಿತರಾಗುವಂತೆ ಮಾಡಿದ್ದಾರೆ ಎಂದರು.
ಗೌಡರ ಹಾದಿಯಲ್ಲೇ ಸಾಗುತ್ತಿರುವ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರು ಕೆಂಪೇಗೌಡ ಬಡಾವಣೆ ನಿರ್ಮಾಣ ವಿರೋಧಿಸಿ ಹೋರಾಟ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದ್ದಾರೆ.