ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪೈಗಂಬರ್ ವಿರುದ್ಧ ಲೇಖನ: ಶಿವಮೊಗ್ಗ, ಹಾಸನದಲ್ಲಿ ಭುಗಿಲೆದ್ದ ಹಿಂಸಾಚಾರ (Hassan | Mohammad paigambar | Muslim association | Daily paper | protest)
Bookmark and Share Feedback Print
 
ರಾಜ್ಯ ಮಟ್ಟದ ದೈನಿಕವೊಂದರಲ್ಲಿ ಮೊಹಮ್ಮದ್ ಪೈಗಂಬರ ಬಗ್ಗೆ ಪ್ರಕಟವಾಗಿದ್ದ ಅನುವಾದಿತ ಲೇಖನದ ವಿರುದ್ಧ ಶಿವಮೊಗ್ಗದಲ್ಲಿ ಮುಸ್ಲಿಂ ಸಂಘಟನೆಗಳು ಸೋಮವಾರ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈ ಸಂದರ್ಭದಲ್ಲಿ ಗಾಂಧಿಬಜಾರ್‌ನಲ್ಲಿ ಪೊಲೀಸರು ಗೋಲಿಬಾರ್ ನಡೆಸಿದ ಪರಿಣಾಮ ಇಬ್ಬರು ವ್ಯಕ್ತಿಗಳು ಬಲಿಯಾಗಿದ್ದಾರೆ.

ಬುರ್ಖಾ ಧಾರಣೆ ಹಾಗೂ ಮೊಹಮ್ಮದ್ ಪೈಗಂಬರರ ಕುರಿತು ವಿವಾದಿದ ಲೇಖಕಿ ತಸ್ಲೀಮಾ ನಸ್ರೀನ್ ಅವರು ಬರೆದಿರುವ ಇಂಗ್ಲಿಷ್ ಲೇಖನದ ಅನುವಾದ ದೈನಿಕವೊಂದರಲ್ಲಿ ಪ್ರಕಟವಾಗಿತ್ತು. ಇದು ಧಾರ್ಮಿಕ ಭಾವನೆಗೆ ಧಕ್ಕೆ ತರುವ ಲೇಖನ ಎಂದು ಆರೋಪಿಸಿರುವ ಮುಸ್ಲಿಂ ಸಂಘಟನೆಗಳು ಶಿವಮೊಗ್ಗದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನೆ ಸಂಜೆ ವೇಳೆಗೆ ಹಿಂಸಾಚಾರಕ್ಕೆ ತಿರುಗಿ, 15ಕ್ಕೂ ಹೆಚ್ಚು ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆಯಿತು. ಅಲ್ಲದೇ ಪೊಲೀಸ್ ವಾಹನಗಳನ್ನು ಜಖಂಗೊಳಿಸಲಾಯಿತು.

ಪೆಟ್ರೋಲ್ ಬಾಂಬ್ ಎಸೆತ: ಬಂದ್ ಹಿನ್ನೆಲೆಯಲ್ಲಿ ಅಂಗಡಿ-ಮುಂಗಟ್ಟುಗಳು ಬಂದ್‌ ಆಗಿವೆ. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಲಘ ಲಾಠಿ ಪ್ರಹಾರ ನಡೆಸಿದರು ಕೂಡ ಪರಿಸ್ಥಿತಿ ಬಿಗುನಿಂದ ಕೂಡಿದೆ. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದ ಪರಿಣಾಮ ರಾಜು ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಉದ್ರಿಕ್ತ ಗುಂಪಿನಿಂದ 12ಬೈಕ್, ಆಟೋ ಬೆಂಕಿಗೆ ಆಹುತಿಯಾಗಿದೆ. ಟಿವಿಎಸ್ ಶೋರೂಂವೊಂದರ ಮೇಲೆ ದಾಳಿ ನಡೆಸಲಾಗಿದೆ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕರ್ಫ್ಯೂ ಜಾರಿಯಾದ ನಂತರವೂ ಹಿಂಸಾಚಾರ ಭುಗಿಲೆದ್ದಿದ್ದು, ಪೊಲೀಸರು ಗೋಲಿಬಾರ್ ನಡೆಸಲು ಮುಂದಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹಿಂಸಾಚಾರದಲ್ಲಿ ಪತ್ರಕರ್ತರು ಕೂಡ ಗಾಯಗೊಂಡಿದ್ದಾರೆ.

ಕಂಡಲ್ಲಿ ಗುಂಡಿಕ್ಕಲು ಆದೇಶ: ಹಿಂಸಾಚಾರ ಭುಗಿಲೆದ್ದಿರುವ ಪರಿಣಾಮ ಕಂಡಲ್ಲಿ ಗುಂಡಿಕ್ಕಲು ಪೂರ್ವ ವಲಯ ಐಜಿಪಿ ಸತ್ಯನಾರಾಯಣ ಅವರು ಆದೇಶ ನೀಡಿದ್ದಾರೆ. ಇದೀಗ ಪರಿಸ್ಥಿತಿ ಹತೋಟಿಯಲ್ಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ನಗರದಲ್ಲಿ ಕರ್ಫ್ಯೂ ಜಾರಿಯಾಗಿರುವುದರಿಂದ ರಾಜೀವ್ ಗಾಂಧಿ ಆರೋಗ್ಯ ವಿವಿ ಪರೀಕ್ಷೆ ಮುಂದೂಡಿರುವುದಾಗಿ ವಿವಿಯ ಕುಲಸಚಿವ ವಸಂತ ಕುಮಾರ್ ತಿಳಿಸಿದ್ದಾರೆ. ಕರ್ಫ್ಯೂವನ್ನು ಹಿಂತೆಗೆದ ಬಳಿಕ ಪರೀಕ್ಷೆಯನ್ನು ನಡೆಸಲಾಗುವುದು ಎಂದು ವಿವರಿಸಿದ್ದಾರೆ.

ಶಾಲಾ-ಕಾಲೇಜಿಗೆ ರಜೆ: ನಗರದಲ್ಲಿ ಉದ್ವಿಗ್ನ ಸ್ಥಿತಿ ಮುಂದುವರಿದಿರುವ ಕಾರಣ ಎರಡು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುಂಜಾಗ್ರತ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಹಾಸನದಲ್ಲೂ ಕರ್ಫ್ಯೂ ಜಾರಿ: ಲೇಖನದ ವಿರುದ್ಧ ಹಾಸನದಲ್ಲಿಯೂ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ನಗರದ ಕಟ್ಟಿನಕೆರೆಯ ಮಾರ್ಕೆಟ್ ಸಮೀಪದ ಚಪ್ಪಲಿ ಅಂಗಡಿಯೊಂದಕ್ಕೆ ಬೆಂಕಿ ಹಚ್ಚಿದ ಘಟನೆ ಸೋಮವಾರ ನಡೆದಿದೆ. ಲೇಖನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಸಂಘಟನೆಗಳು ಈ ಸಂದರ್ಭದಲ್ಲಿ ಆಗ್ರಹಿಸಿವೆ. ಘಟನೆಯಲ್ಲಿ ಹಲವು ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಪರಿಸ್ಥಿತಿ ನಿಯಂತ್ರಣಕ್ಕಾಗಿ ಕರ್ಫ್ಯೂ ಜಾರಿಗೊಳಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಹಾಸನದಲ್ಲಿಯೂ ಪರಿಸ್ಥಿತಿ ಹತೋಟಿಯಲ್ಲಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ವಿವರಿಸಿದ್ದಾರೆ.

ಹಿಂದೂ ಸಂಘಟನೆಗಳಿಂದ ವಿರೋಧ: ನಗರದಲ್ಲಿ ಮುಸ್ಲಿಂ ಸಂಘಟನೆಗಳು ಬಲವಂತವಾಗಿ ಅಮಾಯಕ ಹಿಂದೂಗಳ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿದ್ದನ್ನು ಖಂಡಿಸಿ, ಹಿಂದೂಪರ ಸಂಘಟನೆಗಳು ಕೂಡ ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದವು. ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ವೇಳೆ ನಡೆಸಿದ ದುಷ್ಕೃತ್ಯವನ್ನು ಖಂಡಿಸಿ ಮಂಗಳವಾರ ಹಾಸನ ಬಂದ್‌ಗೆ ಶ್ರೀರಾಮಸೇನೆ ಕರೆ ಕೊಟ್ಟಿದೆ.
ಸಂಬಂಧಿತ ಮಾಹಿತಿ ಹುಡುಕಿ