ರಾಜ್ಯದ ಹಣಕಾಸು ಸ್ಥಿತಿ ಹದಗೆಟ್ಟಿದೆ ಎಂಬ ಪ್ರತಿಪಕ್ಷಗಳ ಮುಖಂಡರ ಟೀಕೆಗಳಿಗೆ ಬಜೆಟ್ ಮೂಲಕ ತಕ್ಕ ಉತ್ತರ ನೀಡುವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ಯಾವುದೇ ಅಂಕಿ ಅಂಶಗಳಿಲ್ಲದೆ ವಿಪಕ್ಷಗಳ ಮುಖಂಡರು ಟೀಕೆ ಮಾಡುತ್ತಿದ್ದಾರೆ. ನಾನು ಬಜೆಟ್ ಮಂಡನೆ ಮಾಡಿದ ನಂತರ ಅವರ ಅಭಿಪ್ರಾಯ ಹೇಳಲಿ ಎಂದು ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಸೋಮವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ನೌಕರರಿಗೆ ಸಂಬಳ ಕೊಡಲಿಕ್ಕೂ ಸರ್ಕಾರದ ಬಳಿ ಹಣ ಇಲ್ಲ. ಆರ್ಥಿಕ ನೆರವಿಗಾಗಿ ಆರ್‌ಬಿಐ ಮೊರೆ ಹೋಗಲಾಗಿದೆ ಎಂಬ ಪ್ರತಿಪಕ್ಷಗಳ ಮುಖಂಡರ ಟೀಕೆಗಳಲ್ಲಿ ಹುರುಳಿಲ್ಲ. ರಾಜ್ಯದ ಹಣಕಾಸು ಸ್ಥಿತಿ ಉತ್ತಮವಾಗಿದೆ ಎಂದು ಸ್ಪಷ್ಟಪಡಿಸಿದರು.
ಪ್ರತಿಪಕ್ಷಗಳ ಎಲ್ಲಾ ಟೀಕೆಗಳಿಗೂ ಬಜೆಟ್ ಅಧಿವೇಶನದಲ್ಲಿ ಉತ್ತರ ನೀಡುವೆ. ಬೆಳಿಗ್ಗೆ 10ಗಂಟೆಯಿಂದ ರಾತ್ರಿ 8ಗಂಟೆಯಾದರೂ ಅಧಿವೇಶನದಲ್ಲಿ ಪಾಲ್ಗೊಂಡು ಟೀಕೆ ಟಿಪ್ಪಣಿಗಳನ್ನು ಆಲಿಸಿ, ಅದಕ್ಕೆ ಉತ್ತರ ನೀಡುವುದಾಗಿ ಸವಾಲು ಹಾಕಿದರು.