ಅಧಿಕಾರಕ್ಕೆ ಬರುವಾಗ ಕೊಟ್ಟ ಭರವಸೆಯಂತೆ ವಿದ್ಯುತ್ ನೀಡದೆ ರಾಜ್ಯವನ್ನು ಕತ್ತಲಲ್ಲಿ ಮುಳುಗಿಸಿರುವ ಬಿಜೆಪಿ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಹಕ್ಕಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.
ಸೋಮವಾರ ವಿಧಾನಸಭೆಯ ಅಧಿವೇಶನದಲ್ಲಿ ಮಾತನಾಡಿದ ಅವರು,ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಪಂಪ್ ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ಸಿಗುತ್ತಿಲ್ಲ. ಶಾಲಾ ಮಕ್ಕಳಿಗೆ ಓದಲು ವಿದ್ಯುತ್ ಕೊಡುತ್ತಿಲ್ಲ. ಜನತೆಯನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದ ಬಿಜೆಪಿ ಯಾವ ಕಾರಣಕ್ಕೆ ಅಧಿಕಾರದಲ್ಲಿ ಮುಂದುವರಿಯಬೇಕು ಎಂದು ಪ್ರಶ್ನಿಸಿದರು.
ಚುನಾವಣಾ ಕಾಲದಲ್ಲಿ ವಿದ್ಯುತ್ ಪೂರೈಸಿದ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ಖರೀದಿಯನ್ನು ಕೈ ಬಿಟ್ಟಿದೆ ಎಂದು ಸಿದ್ದು ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.