ಅಬ್ಬಾ...ಹೋರಾಟ ನಮಗೂ ಸಾಕಾಗಿ ಹೋಗಿದೆ...!ಈ ರೀತಿ ಪ್ರತಿಕ್ರಿಯಿಸಿದವರು ಇತ್ತೀಚೆಗೆ ನಿರಂತರವಾಗಿ ಪ್ರತಿಭಟನೆಗಳಲ್ಲಿ ತೊಡಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ.
ನೈಸ್ ಯೋಜನೆಯಿಂದ ಭೂಮಿ ಕಳೆದುಕೊಂಡಿರುವ ರೈತರ ವಿವರ ನೀಡುವಂತೆ ಕಳೆದ ಒಂದು ತಿಂಗಳ ಹಿಂದೆ ಬೃಹತ್ ಜಾಥಾ ನಡೆಸಿ, ಕೆಐಎಡಿಬಿಗೆ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ. ಹಾಗಾಗಿ ಮಂಗಳವಾರ ರೈತರೊಂದಿಗೆ ಮತ್ತೊಮ್ಮೆ ಜಾಥಾ ನಡೆಸಿ, ಮನವಿ ಸಲ್ಲಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಭೂಮಿ ಕಳೆದುಕೊಂಡ ರೈತರ ವೈಯಕ್ತಿಕ ಮಾಹಿತಿ ನೀಡಿ ಅಂದರೆ, ಅಧಿಕಾರಿಗಳು ರೈತರ ಊರು, ಹೆಸರು ಸರ್ವೆ ನಂಬರ್ ಏನನ್ನೂ ನಮೂದಿಸದೇ 1111ಎಕರೆ ಭೂಮಿ ವಶ ಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಹಾಗಾಗಿ ಸಂಸತ್ ಭವನದ ಮುಂದೆ ಮಾ.7ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಹೇಳಿದರು.
ನೈಸ್ ಯೋಜನೆಯಿಂದ ಭೂಮಿ ಕಳೆದುಕೊಂಡಿರುವ 1450 ರೈತರೊಂದಿಗೆ ಮಾ.10 ಮತ್ತು 11ರಂದು ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.