ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಸೋಮವಾರ ತಿರಸ್ಕರಿಸಿದ್ದು, ಮೊದಲು ಮಾರ್ಚ್ 30ರೊಳಗೆ ಚುನಾವಣೆ ನಡೆಸುಂತೆ ಅಂತಿಮ ತೀರ್ಪು ನೀಡಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಇದರಿಂದಾಗಿ ಸರ್ಕಾರ ಮತ್ತೊಮ್ಮೆ ಮುಖಭಂಗ ಅನುಭವಿಸಿದೆ.
ಬಿಬಿಎಂಪಿ ಚುನಾವಣೆ ಕುರಿತಂತೆ ಸರ್ಕಾರದಿಂದ ಸ್ಪಷ್ಟವಾಗಿ ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಸೋಮವಾರ ಹೈಕೋರ್ಟ್ ವಿಭಾಗೀಯ ಪೀಠ ತರಾಟೆಗೆ ತೆಗೆದುಕೊಂಡಿದ್ದು, ಈಗಲಾದ್ರು ಸರ್ಕಾರ ಕಣ್ಣು ತೆರೆದು ಚುನಾವಣೆ ನಡೆಸುವಂತೆ ಅಂತಿಮ ಆದೇಶ ನೀಡಿದೆ.
ನಿಗದಿತ ಅವಧಿಯೊಳಗೆ ಚುನಾವಣೆ ನಡೆಸುವಂತೆ ತಾಕೀತು ಮಾಡಿರುವ ಹೈಕೋರ್ಟ್, ಮಾರ್ಚ್ 3ರೊಳಗೆ ಚುನಾವಣಾ ಆಯೋಗಕ್ಕೆ ಪರಿಷ್ಕೃತ ಮೀಸಲಾತಿ ಪಟ್ಟಿಯನ್ನು ಸಲ್ಲಿಸುವಂತೆ ಸೂಚಿಸಿದೆ.
ಬಿಬಿಎಂಪಿ ಚುನಾವಣೆ ಮುಂದೂಡಿಕೆ ಕುರಿತಂತೆ ಸಾಕಷ್ಟು ಕಸರತ್ತು ನಡೆಸಿದ್ದ ರಾಜ್ಯ ಸರ್ಕಾರ ಪದೇ ಪದೇ ಕಾನೂನು ಮೊರೆ ಹೋಗಿ, ಹೈಕೋರ್ಟ್‌ನಿಂದ ಸೋಮವಾರ ಕೂಡ ಛೀಮಾರಿ ಹಾಕಿಸಿಕೊಂಡಿದೆ. ಮಾ.30ರೊಳಗೆ ಬಿಬಿಎಂಪಿ ಚುನಾವಣೆ ನಡೆಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿತ್ತು. ಆದರೆ ಹೈಕೋರ್ಟ್ ನೀಡಿದ್ದ ಅಂತಿಮ ತೀರ್ಪಿನ ವಿರುದ್ಧವೇ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಪ್ರಕರಣದ ಕುರಿತು ಸುಪ್ರೀಂಕೋರ್ಟ್ ಕೂಡ ಹೈಕೋರ್ಟ್ ನೀಡಿರುವ ತೀರ್ಪನ್ನು ಎತ್ತಿಹಿಡಿದು, ಚುನಾವಣೆ ನಡೆಸಲು ಕಾಲಾವಕಾಶ ಬೇಕಿದ್ದರೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಎಂದು ಸೂಚಿಸಿತ್ತು. ಅದರಂತೆ ಕೊನೆಯ ಅಸ್ತ್ರ ಎಂಬಂತೆ ಮತ್ತೆ ಹೈಕೋರ್ಟ್ ಮೆಟ್ಟಿಲೇರಿತ್ತು.
ಮಾ.30ರೊಳಗೆ ಚುನಾವಣೆ ನಡೆಸುವಂತೆ ಸ್ಪಷ್ಟ ನಿರ್ದೇಶನ ನೀಡಿದ್ದರೂ ಕೂಡ ಸಿನಿಮೀಯ ರೀತಿಯಲ್ಲಿ ಚುನಾವಣೆ ಮುಂದೂಡುವ ನಾಟಕದ ಅಗತ್ಯವಿಲ್ಲ ಎಂದು ವಿಭಾಗೀಯ ಪೀಠ ತರಾಟೆಗೆ ತೆಗೆದುಕೊಳ್ಳುವ ಮೂಲಕ ಸರ್ಕಾರ ಕೊನೆಗೂ ನ್ಯಾಯಾಲಯದ ತೀರ್ಪಿಗೆ ಮಣಿಯುವಂತಾಗಿದೆ.
ನಿಗದಿತ ಅವಧಿಯೊಳಗೆ ಚುನಾವಣೆ ನಡೆಸ್ತೇವೆ-ಅಶೋಕ್: ಬಿಬಿಎಂಪಿ ಚುನಾವಣೆ ಕುರಿತಂತೆ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪಿಗೆ ಬದ್ಧವಾಗಿರುವುದಾಗಿ ಸಾರಿಗೆ ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಮಾ.30ರೊಳಗೆ ಚುನಾವಣೆ ನಡೆಸುವುದಾಗಿ ಹೇಳಿದ ಅವರು, ನಾಳೆಯಿಂದಲೇ ಚುನಾವಣೆಗೆ ಸಿದ್ಧತೆ ನಡೆಸುವುದಾಗಿ ಸ್ಪಷ್ಟಪಡಿಸಿದರು.