ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ಮೈರೋಳಿ ದಟ್ಟಾರಣ್ಯದಲ್ಲಿ ನಕ್ಸಲ್ ನಿಗ್ರಹ ಪಡೆ ಪೊಲೀಸರ ಗುಂಡೇಟಿಗೆ ನಕ್ಸಲ್ ಯುವಕನೊಬ್ಬ ಬಲಿಯಾಗಿರುವ ಘಟನೆ ಸೋಮವಾರ ನಡೆದಿದೆ.
ನಕ್ಸಲ್ ನಿಗ್ರಹ ಪಡೆ ಮತ್ತು ನಕ್ಸಲೀಯರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ನಕ್ಸಲ್ ತಂಡದ ಸ್ಥಳೀಯ ನಾಯಕ, ಬೆಳ್ತಂಗಡಿ ತಾಲೂಕಿನ ಕುತ್ಲೂರು ವಸಂತ ಎಂದು ಗುರುತಿಸಲಾಗಿದೆ.
ಯುವಕನ ಶವದ ಬಳಿ ಒಂದು ಸೆಲ್ಫ್ ಲೋಡೆಡ್ ರೈಫಲ್, ಮೂರು ಮ್ಯಾಗಝಿನ್, ಬಟ್ಟೆ ಇದ್ದ ಕೈಚೀಲ, ನಕ್ಸಲ್ ಸಾಹಿತ್ಯದ ಪುಸ್ತಕಗಳು ದೊರೆತಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟ ವಸಂತ ಕಳೆದ ಹತ್ತು ವರ್ಷಗಳಿಂದ ನಕ್ಸಲ್ ಚಟುವಟಿಕೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಆತನ ಜೊತೆಗಿದ್ದ ಮತ್ತಿಬ್ಬರು ನಕ್ಸಲರು ಗಾಯಗೊಂಡು ಕಾಡಿನಲ್ಲಿ ಪರಾರಿಯಾಗಿದ್ದಾರೆ. ಕಾಡಿನಲ್ಲಿ ತಪ್ಪಿಸಿಕೊಂಡ ಇಬ್ಬರಲ್ಲಿ ಓರ್ವ ಯುವತಿಯೂ ಸೇರಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ಚಕಮಕಿಯಲ್ಲಿ ನಕ್ಸಲ್ ನಿಗ್ರಹ ಪಡೆಯ ಪೇದೆಯೊಬ್ಬರ ಭುಜಕ್ಕೆ ಗುಂಡು ತಗಲಿದ್ದು. ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ಪೊಲೀಸ್ ವರಿಷ್ಠ ಪ್ರವೀಣ್ ಪವಾರ್ ಮತ್ತು ನಕ್ಸಲ್ ನಿಗ್ರಹ ಪಡೆಯ ಎಸ್ಪಿ ವಾಸುದೇವ ರಾವ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿತ್ತು.