ಬೆಂಗಳೂರು ನಗರದಲ್ಲಿ 23ಗಂಟೆ ಹಾಗೂ ನಗರ, ಪಟ್ಟಣಗಳಲ್ಲಿ 22ಗಂಟೆಗಳ ಕಾಲ ನಿರಂತರ ವಿದ್ಯುತ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಮಂಗಳವಾರ ವಿಧಾನಮಂಡಲದಲ್ಲಿ ವಿದ್ಯುತ್ ಸಮಸ್ಯೆ ಕುರಿತ ಚರ್ಚೆಗೆ ಉತ್ತರ ನೀಡಿದ ಅವರು,ವಿದ್ಯಾರ್ಥಿಗಳ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಈ ಸಂದರ್ಭದಲ್ಲಿ ನಗರ ಮತ್ತು ಪಟ್ಟಣಗಳಲ್ಲಿ 22ಗಂಟೆಗಳ ಕಾಲ ವಿದ್ಯುತ್ ನೀಡಲು ನಿರ್ಧರಿಸಿರುವುದಾಗಿ ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ 6ಗಂಟೆ ಕಾಲ 3ಫೇಸ್ ಹಾಗೂ 6ಗಂಟೆ ಸಿಂಗಲ್ ಫೇಸ್ ವಿದ್ಯುತ್ ನೀಡಲಾಗುವುದು ಎಂದು ಸದನದಲ್ಲಿ ವಿವರಿಸಿದರು. ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಅಲ್ಲದೇ ವಿದ್ಯುತ್ ಕಳ್ಳತನ ತಡೆಗೆ ಕಟ್ಟೆಚ್ಚರ ವಹಿಸಲಾಗಿದೆ ಎಂದ ಮುಖ್ಯಮಂತ್ರಿಗಳು, ಫೆಬ್ರುವರಿಯಲ್ಲಿ 400ಮೆಗಾವ್ಯಾಟ್ ಹಾಗೂ ಮಾರ್ಚ್ ತಿಂಗಳಿನಲ್ಲಿ ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ನಿರಂತರವಾಗಿ ವಿದ್ಯುತ್ ಕಣ್ಣಾ ಮುಚ್ಚಾಲೆ ಆಡುತ್ತಿರುವ ಬಗ್ಗೆ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಅಧಿಕಾರದ ಗದ್ದುಗೆ ಏರುವ ಮುನ್ನ ರೈತರಿಗೆ 24ಗಂಟೆಗಳ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಭರವಸೆ ನೀಡಿದ ಸರ್ಕಾರ ಇದೀಗ ರಾಜ್ಯವನ್ನೇ ಕತ್ತಲಲ್ಲಿ ಮುಳುಗಿಸಿದೆ ಎಂದು ಆರೋಪಿಸಿದ್ದರು.
ಪ್ರತಿಪಕ್ಷಗಳ ವಾಗ್ದಾಳಿ ನಂತರ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಈ ಹಿಂದೆ ಆಡಳಿತ ನಡೆಸಿದ ನೀವು ಎಷ್ಟು ವಿದ್ಯುತ್ ನೀಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ರೈತರ ಹಾಗೂ ರಾಜ್ಯದ ಹಿತ ಕಾಯುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಈ ಸಂದರ್ಭದಲ್ಲಿ ಹೇಳಿದರು.