ಬಿಬಿಎಂಪಿ ಚುನಾವಣೆ ಮಾರ್ಚ್ 28 ಅಥವಾ 29ರಂದು ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ರಾಜ್ಯ ಹೈಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪಿನ ಅನ್ವಯ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಮಾರ್ಚ್ ತಿಂಗಳ ಅಂತ್ಯದ ಮೂರು ಬೇರೆ, ಬೇರೆ ದಿನಾಂಕಗಳನ್ನು ನಿಗದಿಪಡಿಸಿ, ಹೈಕೋರ್ಟಿಗೆ ವರದಿಯನ್ನು ನೀಡಿತ್ತು.
ಈ ದಿನಾಂಕಗಳಲ್ಲಿ ಮಾರ್ಚ್ 29ಕ್ಕೆ ಸರಿಹೋಗುವಂತೆ ವೇಳಾಪಟ್ಟಿಯೊಂದನ್ನು ರಚಿಸಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಅಧಿಕೃತ ಮೂಲವೊಂದು ತಿಳಿಸಿದೆ.
ರಾಜ್ಯ ಸರ್ಕಾರ ಬುಧವಾರ ಸಂಜೆಯೊಳಗಾಗಿ ಪರಿಷ್ಕೃತ ವಾರ್ಡ್ ಮೀಸಲಾತಿ ಪಟ್ಟಿಯನ್ನು ಆಯೋಗಕ್ಕೆ ನೀಡಲಿದ್ದು, ಒಂದೆರಡು ದಿನಗಳಲ್ಲಿ ಸರ್ಕಾರಿ ಗಜೆಟ್ನಲ್ಲಿ ಕೂಡ ಪ್ರಕಟವಾಗಲಿದೆ.
ಮಾರ್ಚ್ 5ರಂದು ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆ ಇದ್ದು, ಮಾರ್ಚ್ 29ರಂದು ಚುನಾವಣೆ ನಡೆಸಲು ಹಾಗೂ ಮಾರ್ಚ್ 31ರಂದು ಫಲಿತಾಂಶ ಪ್ರಕಟಿಸುವ ಸಾಧ್ಯತೆಗಳಿವೆ.