ವಿವಾದಿತ ಲೇಖಕಿ ತಸ್ಲಿಮಾ ನಸ್ರೀನ್ ಅವರ ಲೇಖನ ಪ್ರಕಟಿಸಿದ ಪ್ರಕರಣವು ಮಂಗಳವಾರ ರಾತ್ರಿ ತನ್ನ ಪ್ರಭಾವ ಮುಂದುವರಿಸಿದ್ದು, ಮಂಗಳೂರಿನಲ್ಲಿ ಪತ್ರಿಕಾ ಕಚೇರಿಗೆ ಪೆಟ್ರೋಲ್ ಬಾಂಬ್ ಎಸೆಯಲಾಗಿದ್ದರೆ, ಇನ್ನೊಂದು ಪತ್ರಿಕೆಯ ಕಚೇರಿಗೆ ಕಲ್ಲು ತೂರಾಟ ನಡೆಸಿ ಹಾನಿ ಮಾಡಲಾಗಿದೆ.
ತಸ್ಲಿಮಾ ಅವರು ಪರ್ದಾ ಕುರಿತು ಬರೆದ ಲೇಖನದ ಅನುವಾದ ಪ್ರಕಟಿಸಿರುವ ಪತ್ರಿಕಾ ಕಚೇರಿಗೆ ಮಂಗಳವಾರ ಅಪರಿಚಿತ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಇದಲ್ಲದೆ, ಬಿಜೈನಲ್ಲಿರುವ ಸಂಜೆ ಪತ್ರಿಕೆಯೊಂದರ ಕಚೇರಿಗೂ ಕಲ್ಲು ತೂರಲಾಗಿದೆ.
ಈ ಹಿನ್ನೆಲೆಯಲ್ಲಿ ಮಂಗಳೂರಿನ ಎಲ್ಲ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಪಡೆ ನಿಯೋಜನೆಯೊಂದಿಗೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಮುಸುಕುಧಾರಿಗಳು ದೈನಿಕದ ಕಚೇರಿಗೆ ನುಗ್ಗಿ, ಅಲ್ಲಿದ್ದ ಸಿಬ್ಬಂದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಮನಸೋ ಇಚ್ಛೆ ಕಲ್ಲು ತೂರಾಟ ನಡೆಸಿದರು. ದಾಳಿಯಲ್ಲಿ ಪ್ರಿಂಟರ್, ಕಂಪ್ಯೂಟರ್ ಮತ್ತಿತರ ಸೊತ್ತುಗಳು ಪುಡಿಯಾಗಿದ್ದು, ಕಿಟಕಿ ಗಾಜುಗಳನ್ನೂ ಪುಡಿಗಟ್ಟಲಾಗಿದೆ. ಪೀಠೋಪಕರಣಗಳೂ ದಾಳಿಯಲ್ಲಿ ಜಖಂಗೊಂಡಿವೆ.
ಹೆಚ್ಚಿನ ಸಿಬ್ಬಂದಿ ಪತ್ರಿಕಾ ಕಚೇರಿಯ ಮತ್ತೊಂದು ಮಗ್ಗುಲಲ್ಲಿದ್ದ ಕಾರಣದಿಂದಾಗಿ, ಅವರೆಲ್ಲರೂ ಹಲ್ಲೆಗೀಡಾಗುವುದರಿಂದ ಪಾರಾಗಿದ್ದರು.
ಬಳಿಕ ಇದೇ ತಂಡವು, ಸ್ಥಳೀಯ ಸಂಜೆ ಪತ್ರಿಕೆಯೊಂದರ ಕಚೇರಿಗೂ ನುಗ್ಗಿ, ಇದೇ ರೀತಿ ದಾಂಧಲೆ ನಡೆಸಿತು. ಸೀಮೆಎಣ್ಣೆಯ ಪ್ಯಾಕೆಟ್‌ಗಳನ್ನು ಎಸೆಯಿತು ಎಂದು ತಿಳಿದುಬಂದಿದೆ. ಇಲ್ಲಿಯೂ ಕೂಡ ಪೀಠೋಪಕರಣಗಳು, ಕಂಪ್ಯೂಟರುಗಳು ಪುಡಿಯಾಗಿವೆ.
ದೈನಿಕ ಮತ್ತು ಸಂಜೆ ಪತ್ರಿಕೆಯ ಮೇಲೆ ಮಂಗಳವಾರ ರಾತ್ರಿ ಸರಣಿ ದಾಳಿ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಎರಡು ದಿನ ನಿಷೇಧಾಜ್ಞೆ ವಿಧಿಸಲಾಗಿದೆ.
ಈ ಮಧ್ಯೆ, ಶಿವಮೊಗ್ಗದ ಜನತೆ ನಿಟ್ಟುಸಿರು ಬಿಟ್ಟಿದ್ದು, ಪರಿಸ್ಥಿತಿ ಶಾಂತವಾಗಿದೆ. ಬುಧವಾರ ಬೆಳಿಗ್ಗೆ ಕರ್ಫ್ಯೂ ಸಡಿಲಿಸಿದ ಕಾರಣದಿಂದಾಗಿ ನಾಗರಿಕರು ಆವಶ್ಯಕ ವಸ್ತುಗಳನ್ನು ಖರೀದಿಸಿದರು.