ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ ಅವರ ಬರಹ ಸಮಾಜದಲ್ಲಿ ಕೋಮುದಳ್ಳುರಿಗೆ ಕಾರಣವಾಗುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ, ತಸ್ಲೀಮಾಗೆ ಭಾರತ ಆಶ್ರಯ ನೀಡಬಾರದು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ತಸ್ಲೀಮಾ ಅವರ ಇಂಗ್ಲಿಷ್ ಲೇಖನದ ಅನುವಾದ ಪ್ರಕಟಗೊಂಡ ನಂತರ ಶಿವಮೊಗ್ಗ, ಹಾಸನಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಶಿವಮೊಗ್ಗದಲ್ಲಿ ಪೊಲೀಸರ ಗೋಲಿಬಾರ್‌ಗೆ ಇಬ್ಬರು ಬಲಿಯಾಗಿದ್ದರು. ಘಟನೆ ಕುರಿತಂತೆ ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಪೂಜಾರಿ, ತಸ್ಲೀಮಾಗೆ ಭಾರತ ಯಾವುದೇ ಕಾರಣಕ್ಕೂ ಆಶ್ರಯ ನೀಡಬಾರದು ಎಂದರು.
ಪ್ರತಿಯೊಬ್ಬರಿಗೂ ಅವರದ್ದೇ ಆದ ಧರ್ಮಾಚರಣೆ ಮಾಡುವ ಅಧಿಕಾರ ಇದೆ. ಆದರೆ ಅದಕ್ಕೆ ಯಾರೂ ನೋವುಂಟು ಮಾಡಬಾರದು. ತಸ್ಲೀಮಾ ಮುಸ್ಲಿಮ್ ಸಮುದಾಯಕ್ಕೆ ನೋವುಂಟಾಗುವಂತಹ ಲೇಖನ, ಕಾದಂಬರಿ ಬರೆಯುವ ಮೂಲಕ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ ಎಂದು ದೂರಿದರು.
ಅಲ್ಲದೇ ಪ್ರತಿಭಟನಾಕಾರರು ಕೂಡ ಶಾಂತಿಯಿಂದ ಪ್ರತಿಭಟನೆ ನಡೆಸಬೇಕು. ಆವೇಶದ ಭರದಲ್ಲಿ ಹಿಂಸಾಚಾರಕ್ಕೆ ಇಳಿದು ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟ ಉಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ಹೇಳಿದರು.