ನೀನು ಬಳ್ಳಾರಿಗೆ ಬಾ: ಮೇಲ್ಮನೆಯಲ್ಲಿ ಜನಾರ್ದನ ರೆಡ್ಡಿ ಧಮಕಿ!
ಬೆಂಗಳೂರು, ಬುಧವಾರ, 3 ಮಾರ್ಚ್ 2010( 16:27 IST )
NRB
'ನೀನು ಬ್ರೋಕರ್ ಕೊಂಡಯ್ಯ, ನಿನ್ನನ್ನು ಯಾರೂ ಎಂಎಲ್‌ಸಿ ಅಂತ ಕರೆಯುವುದಿಲ್ಲ'...ಹೀಗೆ ಬಾಯಿಗೆ ಬಂದಂತೆ ಬುಧವಾರ ಮೇಲ್ಮನೆಯ ಕಲಾಪದಲ್ಲಿ ವಾಗ್ದಾಳಿ ನಡೆಸಿದವರು ಸಚಿವ ಜನಾರ್ದನ ರೆಡ್ಡಿ!
ಬುಧವಾರ ಮೇಲ್ಮನೆಯ ಕಲಾಪದಲ್ಲಿ ಕಾಂಗ್ರೆಸ್‌ನ ಹಿರಿಯ ಸದಸ್ಯ ಕೆ.ಸಿ.ಕೊಂಡಯ್ಯ ಅವರು ಗಣಿ ವಿಷಯ ಬಗ್ಗೆ ಧ್ವನಿ ಎತ್ತುತ್ತಿದ್ದಂತೆಯೇ, ಏಕಾಏಕಿ ತಾಳ್ಮೆಕಳೆದುಕೊಂಡ ರೆಡ್ಡಿ, ಬಳ್ಳಾರಿ ಮೈನಿಂಗ್ ಹಾಳು ಮಾಡಿದ್ದೇ ನೀನು. ಗಣಿ ಮಾಲೀಕರಿಂದ ಹಣ ವಸೂಲಿ ಮಾಡುವ ನೀನು ಬಳ್ಳಾರಿಗೆ ಬಾ ಎಂದು ಕೈ ತೋರಿಸಿ ಎಚ್ಚರಿಸಿದರು. ಇದರಿಂದಾಗಿ ಸದನ ಕೋಲಾಹಲದ ಗೂಡಾಗಿ ಆರೋಪ-ಪ್ರತ್ಯಾರೋಪಕ್ಕೆ ಎಡೆ ಮಾಡಿಕೊಟ್ಟ ಘಟನೆ ನಡೆಯಿತು.
ರೆಡ್ಡಿ ಅವರ ಆರೋಪಕ್ಕೆ ಕುಪಿತರಾದ ಕೊಂಡಯ್ಯ ಕೂಡ, ನೀನೇನು...ನಿನ್ನ ಯೋಗ್ಯತೆ ಏನು ಅಂತ ಎಲ್ಲರಿಗೂ ಗೊತ್ತು ಎಂದಾಗ ಇಬ್ಬರ ನಡುವೆಯೂ ವೈಯಕ್ತಿಕ ನಿಂದನೆಯ ವಾಗ್ದಾಳಿ ನಡೆಯಿತು.
ಕೊಂಡಯ್ಯ ವಿರುದ್ಧ ಏಕವಚನ ಬಳಸಿ ಬಾಯಿಗೆ ಬಂದಂತೆ ಮಾತನಾಡಿರುವುದನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ತೀವ್ರವಾಗಿ ಖಂಡಿಸಿ, ಜನಾರ್ದನ ರೆಡ್ಡಿ ಬೇಷರತ್ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದರು. ಸಚಿವ ರೆಡ್ಡಿಯವರ ಮಾತು ಅತಿಯಾಯ್ತು ಎಂದ ಎ.ಆರ್.ಸುದರ್ಶನ್, ಸಚಿವರಾದವರು ತಾಳ್ಮೆಯಿಂದ ವರ್ತಿಸಬೇಕು ಎಂದರು.
ಆದರೆ ಯಾವುದಕ್ಕೂ ಜನಾರ್ದನ ರೆಡ್ಡಿಯವರು ಜಗ್ಗದಿದ್ದಾಗ ಸಿಟ್ಟಿಗೆದ್ದ ನಾಣಯ್ಯ, ಮತ್ತಿತರು ಇದು ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ದುರಂತ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರೊಬ್ಬರು ಸದನದ ಕಲಾಪದಲ್ಲಿ ನಡೆದುಕೊಳ್ಳುವ ರೀತಿ ಇದೇನಾ ಎಂದು ತರಾಟೆಗೆ ತೆಗೆದುಕೊಂಡರು.
ಏತನ್ಮಧ್ಯೆ ಮೋಟಮ್ಮ, ಎಸ್.ಆರ್.ಪಾಟೀಲ್ ಮುಂತಾದವರು ಮಾತನಾಡಿ, ಇದು ಅತಿರೇಕವಾಗಿದೆ. ಕೂಡಲೇ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದರು. ಹೀಗೆ ವಾಗ್ವಾದ ನಡೆಯುತ್ತಿದ್ದಾಗ ಸಭಾನಾಯಕ ವಿ.ಎಸ್.ಆಚಾರ್ಯ ಮಾತನಾಡಿ, ಸದನದ ಗೌರವ ಕಾಪಾಡಿ, ಚ್ಯುತಿ ಬಾರದಂತೆ ನಡೆದುಕೊಳ್ಳುವುದಾಗಿ ಭರವಸೆ ನೀಡಿದರು.