ಪ್ರವಾದಿ ಮೊಹಮ್ಮದ್ ಪೈಗಂಬರ ವಿರುದ್ಧ ಪತ್ರಿಕೆಯೊಂದರಲ್ಲಿ ಲೇಖನ ಪ್ರಕಟವಾಗಿದ್ದನ್ನು ವಿರೋಧಿಸಿ ಶಿವಮೊಗ್ಗದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟು ಸಹಜಸ್ಥಿತಿಗೆ ಬರುತ್ತಿದೆ ಎನ್ನುವಷ್ಟರಲ್ಲಿಯೇ ಬುಧವಾರ ಮತ್ತೆ ಕಿಡಿಗೇಡಿಗಳು ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ ಹಚ್ಚಿದ ಘಟನೆ ಇಲ್ಲಿನ ಹಳೇಮಂಡಿ ಪೇಟೆಯಲ್ಲಿ ನಡೆದಿದೆ.
ಹಿಂಸಾಚಾರದಿಂದ ತತ್ತರಿಸಿದ್ದ ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕಾಗಿ ಕರ್ಫ್ಯೂ ಹೇರಲಾಗಿತ್ತು. ಬುಧವಾರ ಸಂಜೆ 4-30ರಿಂದ 5-30ರವರೆಗೆ ಕರ್ಫ್ಯೂ ಸಡಲಿಕೆ ಮಾಡಿದ ವೇಳೆ ಕಿಡಿಗೇಡಿಗಳು ಮೂಕಾಂಬಿಕಾ ಪ್ಲಾಸ್ಟಿಕ್ ಕಂಪನಿಯ ಗೋದಾಮಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಲೇಖನದ ವಿರುದ್ಧ ಮುಸ್ಲಿಂ ಸಂಘಟನೆಗಳು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಘಟನೆಯಲ್ಲಿ ಪೊಲೀಸರ ಗೋಲಿಬಾರ್‌ಗೆ ಇಬ್ಬರು ಸಾವನ್ನಪ್ಪಿದ್ದರು. ನಂತರ ಕರ್ಫ್ಯೂ ಹೇರಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿತ್ತು.
ಆದರೂ ನಗರದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ನಾಳೆಯಿಂದ ಶಾಲಾ-ಕಾಲೇಜು ಆರಂಭವಾಗಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮುರುಗನ್ ತಿಳಿಸಿದ್ದು, ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ ವಿನಃ ಕಿಡಿಗೇಡಿಗಳ ಕೃತ್ಯವಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಹಾಸನದಲ್ಲೂ ಪರಿಸ್ಥಿತಿ ಶಾಂತ: ಹಾಸನದಲ್ಲಿಯೂ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಸಾಕಷ್ಟು ನಷ್ಟ ಸಂಭವಿಸಿತ್ತು. ಇದೀಗ ಪರಿಸ್ಥಿತಿ ಶಾಂತವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.