ಶಿವಮೊಗ್ಗ ಮತ್ತು ಹಾಸನಗಳಲ್ಲಿ ನಡೆದ ಘಟನೆಗೆ ಮುಸ್ಲಿಮರೇ ಕಾರಣ ಎಂದು ಶ್ರೀರಾಮಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್ ಆರೋಪಿಸಿದ್ದು, ಆದರೆ ಘಟನೆ ಕುರಿತಂತೆ ಬುದ್ಧಿಜೀವಿಗಳು, ವಿಚಾರವಾದಿಗಳು ಬಾಯಿಮುಚ್ಚಿಕೊಂಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.
ಹಿಂದೂ ಸಂಘಟನೆಗಳು ಪ್ರತಿಭಟನೆ ಮಾಡಿದಾಗ ದೊಡ್ಡದಾಗಿ ಧ್ವನಿ ಎತ್ತುವ ಬುದ್ದಿಜೀವಿಗಳು ಇದೀಗ ಯಾಕೆ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ತಾಲಿಬಾನೀಕರಣ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ವಿರೋಧ ಪಕ್ಷಗಳು ಕೂಡ ಸೊಲ್ಲೆತ್ತುತ್ತಿಲ್ಲ ಯಾಕೆ ಎಂದರು.
ಒಂದು ಕಡೆ ಜನಾರ್ದನ ಪೂಜಾರಿಯವರು ತಸ್ಲೀಮಾ ಅವರನ್ನು ಹೊರ ಹಾಕಿ ಎನ್ನುತ್ತಾರೆ. ಮತ್ತೊಂದು ಕಡೆ ಕೇಂದ್ರ ಗೃಹ ಸಚಿವ ಚಿದಂಬರಂ ಅವರು, ಹಿಂದೂಗಳ ದೇವತೆಗಳನ್ನು ನಗ್ನವಾಗಿ ಚಿತ್ರಿಸಿದ ಎಂ.ಎಫ್.ಹುಸೇನ್ ಅವರನ್ನು ಸ್ವಾಗತ ಮಾಡುತ್ತಿದ್ದಾರೆ. ಇದು ನಿಜಕ್ಕೂ ವೋಟ್ ಬ್ಯಾಂಕ್ ರಾಜಕೀಯ ಎಂದು ವ್ಯಂಗ್ಯವಾಡಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ರಿಕೆಗಳು ಸಮಾಜಕ್ಕೆ ಉತ್ತಮ ವಿಚಾರಗಳನ್ನು ಕೊಡುವ ಶ್ರೇಷ್ಠ ಕೆಲಸ ಮಾಡುತ್ತಿವೆ. ಲೇಖಕಿ ತಸ್ಲೀಮಾ ಅವರು ಸತ್ಯ ವಿಚಾರವನ್ನೇ ಹೇಳಿದ್ದಾರೆ. ಕುರಾನ್ ಆಧರಿಸಿ ಲೇಖನ ಬರೆದಿದ್ದಾರೆ. ಅದನ್ನು ಕನ್ನಡಕ್ಕೆ ಅನುವಾದ ಮಾಡಲಾಗಿದೆ ಅಷ್ಟೇ. ಇಂತಹ ಲೇಖನವನ್ನೇ ವಿರೋಧಿಸಿ ಗಲಭೆ ಸೃಷ್ಟಿಸಿ ಹಿಂದೂಗಳ ಅಂಗಡಿಗಳ ಮೇಲೆ ದಾಳಿ ನಡೆಸುವ ವ್ಯವಸ್ಥಿತ ಸಂಚು ನಡೆಸಲಾಗುತ್ತಿದೆ ಎಂದು ದೂರಿದರು.
ಲೇಖನಕ್ಕೆ ಸಂಬಂಧಿಸಿದಂತೆ ಮೌಲ್ವಿಗಳು, ಮುಖಂಡರು ಮುಸ್ಲಿಂ ಮಹಿಳೆಯರ ಶೋಷಣೆಗೆ ಸಂಬಂಧಿಸಿದಂತೆ ಮುಕ್ತ ಚರ್ಚೆ ನಡೆಸಬೇಕು. ಯಾಕೆಂದರೆ ಮುಸ್ಲಿಮ್ ಮಹಿಳೆಯರು ಉಸಿರುಗಟ್ಟಿಸುವ ವಾತಾವರಣದಲ್ಲಿ ಬದುಕುತ್ತಿದ್ದಾರೆಂದು ಹೇಳಿದರು.