ಇಂತಹ ಕಾಮುಕ ಸ್ವಾಮೀಜಿಗಳಿಂದಾಗಿ ದೇಶದ ಸಂಸ್ಕೃತಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಕಿಡಿಕಾರಿದ ಅವರು, ಸ್ವಾಮೀಜಿಯನ್ನು ಬಂಧಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು. ಅಲ್ಲದೇ ಆತನ ಆಸ್ತಿ-ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಕ್ರಮ ಕೈಗೊಳ್ಳುತ್ತೇವೆ-ಆಚಾರ್ಯ: ಸಿದ್ದರಾಮಯ್ಯ ಅವರ ಆಗ್ರಹಕ್ಕೆ ಸದನದಲ್ಲಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ವಿ.ಎಸ್.ಆಚಾರ್ಯ, ಸ್ವಾಮೀಜಿ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ. ರಾಮನಗರ ಸಮೀಪದ ಬಿಡದಿಯ ಆಶ್ರಮಕ್ಕೆ ಬುಧವಾರ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಸುಮಾರು 26ಕೆಜಿ ಗಂಧದ ಕೊರಡುಗಳು ದೊರೆತಿವೆ. ಆ ನಿಟ್ಟಿನಲ್ಲಿ ಕೇಸನ್ನು ದಾಖಲಿಸಿಕೊಳ್ಳಲಾಗಿದೆ. ನಿತ್ಯಾನಂದ ಸ್ವಾಮೀಜಿ ಆಸ್ತಿ-ಪಾಸ್ತಿ ಮುಟ್ಟುಗೋಲು ಕುರಿತಂತೆ ತಮಿಳುನಾಡು ಸರ್ಕಾರದ ಜೊತೆಯೂ ನಿರಂತರ ಸಂಪರ್ಕ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.
ಆಶ್ರಮದ ಮೂರು ಮಂದಿ ವಿರುದ್ಧ ದೂರು ದಾಖಲು: ನಿತ್ಯಾನಂದ ಸ್ವಾಮೀಜಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಧ್ಯಾನಾಶ್ರಮದ ಮೂರು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.