ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಖ್ಯಾತ ಕಲಾವಿದ ಎಂ.ಎಫ್.ಹುಸೇನ್ ಭಾರತ ಬಿಟ್ಟು ತೊಲಗಿದರೆ ನಷ್ಟವಿಲ್ಲ. ಅದಕ್ಕಾಗಿ ಗಲಾಟೆ ಎಬ್ಬಿಸುವುದು ಯಾಕೆ ಎಂದು ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಪ್ರತಿಕ್ರಿಯಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸೀತೆ, ಸಾವಿತ್ರಿ, ಸರಸ್ವತಿಯ ಚಿತ್ರವನ್ನು ಅಶ್ಲೀಲವಾಗಿ ಬಿಡಿಸಿದ ಹುಸೇನ್, ಇಸ್ಲಾಂ ಧರ್ಮದ ಅಥವಾ ಮುಲ್ಲಾಗಳ ಕುರಿತು ಒಂದೇ ಒಂದು ಚಿತ್ರ ಯಾಕೆ ಬರೆದಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.
ಹುಸೇನ್ ಅವರ ಧೋರಣೆಯನ್ನು ನಾವು ಖಂಡಿಸಿದರೆ ನಮಗೆ ಹಿಂದುತ್ವವಾದಿ, ಫ್ಯಾಸಿಸ್ಟ್, ಮೂಲಭೂತವಾದಿ ಎಂದೆಲ್ಲಾ ಹಣೆಪಟ್ಟಿ ಕಟ್ಟುತ್ತಾರೆ ಎಂದು ಬುದ್ದಿಜೀವಿ, ವಿಚಾರವಾದಿಗಳ ವಿರುದ್ಧ ಕಿಡಿಕಾರಿದ ಭೈರಪ್ಪ, ಸನಾತನ ಪರಂಪರೆ ದ್ವೇಷಿಸುವ ಇಂತಹವರು ಮಾತ್ರ ಪ್ರತಿಭಟನೆ, ಹೇಳಿಕೆ ನೀಡುವುದನ್ನು ರೂಢಿ ಮಾಡಿಕೊಂಡಿದ್ದಾರೆ ಎಂದರು.
ಎಡಬಿಡಂಗಿತನ ಹೊಂದಿರುವ ವಿಚಾರವಾದಿಗಳೇ ಹುಸೇನ್‌ನಂತಹವರು ಏನು ಮಾಡಿದರೂ ಸಮರ್ಥಿಸಿಕೊಳ್ಳುತ್ತಾರೆ. ಆತ ಭಾರತ ಬಿಟ್ಟು ಹೋಗಿರುವುದು ಇಡೀ ದೇಶವೇ ತಲೆತಗ್ಗಿಸುವಂತಹ ವಿಚಾರ ಎಂದು ಕೆಲವು ಮಾಧ್ಯಮಗಳು ಕೂಡ ಬಣ್ಣಿಸುತ್ತಿವೆ ಎಂದು ಆರೋಪಿಸಿದರು.
ಕಲಾವಿದನಾದವನಲ್ಲಿ ತಾಳ್ಮೆ, ವಸ್ತುನಿಷ್ಠೆ ಇರಬೇಕೆ ವಿನಃ ಕುಹಕ, ಧಾರ್ಮಿಕ ಭಾವನೆಗೆ ಧಕ್ಕೆ ತರುವ ಮನೋಭಾವ ಇರಬಾರದು ಎಂದರು. ಹಾಗಾಗಿ ಹುಸೇನ್ ದೇಶ ಬಿಟ್ಟು ಹೋಗಿರುವುದಕ್ಕೆ ಬೊಬ್ಬೆ ಹೊಡೆಯಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.