ಬಿಬಿಎಂಪಿ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ರಾಜ್ಯ ಕಾಂಗ್ರೆಸ್ ಹಾಗೂ ರಾಜ್ಯ ಉಸ್ತುವಾರಿ ಸಚಿವ ಗುಲಾಂ ನಬಿ ಅಜಾದ್ ಸೂಚನೆ ನೀಡಿದ್ದಾರೆ.
ನಗರಕ್ಕೆ ಆಗಮಿಸಿದ ಅವರು ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ, ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಆಗಿರುವ ತಯಾರಿ ಬಗ್ಗೆ ನಾಯಕರಿಂದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಜೆಡಿಎಸ್ ಜೊತೆ ಮೈತ್ರಿ ಕುರಿತು ಚರ್ಚೆ ನಡೆಸಲಾಗಿದ್ದು, ಜೆಡಿಎಸ್ ಜೊತೆ ಮೈತ್ರಿ ಬೇಡವೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದು ಪಕ್ಷದ ಶಾಸಕರ ಅಭಿಪ್ರಾಯವೂ ಆಗಿರುವುದರಿಂದ ಮೈತ್ರಿ ಅನಗತ್ಯ ಎಂದು ಅಜಾದ್ ತಿಳಿಸಿದ್ದಾರೆ.
ಅಲ್ಲದೆ, ಮುಸ್ಲಿಂ, ಕ್ರೈಸ್ತ ಸಮುದಾಯದ ಮತದಾರರು ಹೆಚ್ಚಾಗಿರುವ ಕಡೆಗಳಲ್ಲಿ ಅದೇ ಸಮುದಾಯದವರಿಗೆ ಟಿಕೆಟ್ ಕೊಡಬೇಕು ಹಾಗೂ ಆ ವರ್ಗದ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಬೇಕು ಎಂಬ ಸಂದೇಶವನ್ನು ಅಜಾದ್ ನೀಡಿದ್ದಾರೆ.