ನಿತ್ಯಾನಂದ ಸ್ವಾಮೀಜಿಯ ರಾಸಲೀಲೆ ಬಯಲಾಗುತ್ತಿದ್ದಂತೆಯೇ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ಲಂಪಟ ಸ್ವಾಮಿಯ ಆಸ್ತಿಯನ್ನು ಸರ್ಕಾರ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಜಯಕರ್ನಾಟಕ ಸಂಘದ ಅಧ್ಯಕ್ಷ, ಮಾಜಿ ಭೂಗತ ದೊರೆ ಮುತ್ತಪ್ಪ ರೈ ಒತ್ತಾಯಿಸಿದ್ದಾರೆ.
ಸ್ವಾಮೀಜಿ ರಾಸಲೀಲೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು,ಸ್ವಾಮೀಜಿಯ ನಡವಳಿಕೆ ಅವರ ಭಕ್ತರಲ್ಲಿ ಅಹಸ್ಯ ಹುಟ್ಟಿಸಿದೆ. ಇಂತಹ ಲಂಪಟ ಸ್ವಾಮೀಜಿಗಳನ್ನು ತಮ್ಮ ಸಂಘಟನೆ ಕೂಡ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸ್ವಾಮೀಜಿ ನಡೆಸುತ್ತಿದ್ದ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳನ್ನು ಸಂಘಟನೆ ಬೆಂಬಲಿಸಿತ್ತು. ಆದರೆ ಅವರು ಭೂ ಕಬಳಿಕೆ ವ್ಯವಹಾರದಲ್ಲಿ ಭಾಗಿಯಾಗಿರಲಿಲ್ಲ. ರೈತರಿಗೆ ಹಣ ನೀಡಿ ಜಮೀನು ಪಡೆದಿದ್ದರು. ಇದನ್ನು ಹೊರತುಪಡಿಸಿ ಸಂಸ್ಥೆಗೆ ಸ್ವಾಮೀಜಿಗಳ ವ್ಯವಹಾರಗಳ ಜೊತೆ ಯಾವುದೇ ಸಂಬಂಧವಿರಲಿಲ್ಲ ಎಂದ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಾಮೀಜಿಯಾಗಿ ಇಂತಹ ಕೃತ್ಯ ಎಸಗಿರುವುದು ಮಹಾ ಅಪರಾಧ. ಇದರಿಂದ ಇತರೆ ಸ್ವಾಮೀಜಿಗಳು ತಲೆತಗ್ಗಿಸುವಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.