ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಇಂದು ಬಜೆಟ್: ಯಡಿಯೂರಪ್ಪ ಜನತೆಯ ಮೇಲೆ ಕೃಪೆ ತೋರುವರೇ? (Budget | Yadyurappa | Tax)
Bookmark and Share Feedback Print
 
NRB
ಸತತ ಐದನೇ ಬಾರಿಗೆ ಇಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ ಮಂಡಿಸುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಇದು ಯಡಿಯೂರಪ್ಪ ಅವರ ಮೂರನೇ ಬಜೆಟ್. ಇಂದು ಮಧ್ಯಾಹ್ನ 12.30ಕ್ಕೆ ವಿಧಾನ ಸಭೆಯಲ್ಲಿ 2010-11ನೇ ಸಾಲಿನ ಬಹುನಿರೀಕ್ಷೆಯ ಮುಂಗಡ ಪತ್ರ ಮಂಡನೆಯಾಗಲಿದೆ.

ಕಳೆದ ಬಾರಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜನತೆಯ ಮೇಲೆ ತೆರಿಗೆಯ ಭಾರವನ್ನು ಹಾಕಿರಲಿಲ್ಲ. ಆದರೆ ಈ ಬಾರಿ ಆರ್ಥಿಕ ಪರಿಸ್ಥಿತಿ ಆಶಾದಾಯಕವಾಗಿಲ್ಲವಾದ್ದರಿಂದ ಸಂಪನ್ಮೂಲಗಳ ಸಂಗ್ರಹದ ಅವಶ್ಯಕತೆ ಹೆಚ್ಚಿದೆ. ಹೀಗಾಗಿ ತೆರಿಗೆ ಹೆಚ್ಚಳದ ಸಂಭವವಿದೆ ಎನ್ನಲಾಗಿದೆ.

ಬಜೆಟ್ ಮಂಡನೆಯ ಶುಭ ಸಂದರ್ಭದಲ್ಲಿ ಇಂದು ಬೆಳಿಗ್ಗೆ ದೇವಾಲಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪೂಜೆ ಸಲ್ಲಿಸಿದರು. ಇದೇ ಸಂದರ್ಭ ಅವರ ಪುತ್ರ ಬಿ.ವೈ. ರಾಘವೇಂದ್ರ ಹಾಗೂ ಕುಟುಂಬ ವರ್ಗವೂ ಹಾಜರಿತ್ತು. ನಂತರ ಮನೆಯಲ್ಲಿ ಸಚಿವರಾದ ವಿ.ಎಸ್.ಆಚಾರ್ಯ, ಈಶ್ವರಪ್ಪ, ರೇಣುಕಾಚಾರ್ಯ ಸೇರಿದಂತೆ ಹಲವು ಸಚಿವರ ಜೊತೆಗೆ ಬೆಳಗಿನ ಉಪಹಾರ ಸೇವಿಸಿದರು.

ಬೆಳಗ್ಗೆ ಪೂಜೆಯ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಯಡಿಯೂರಪ್ಪ, ಗ್ರಾಮೀಣಾಭಿವೃದ್ಧಿ, ವಸತಿ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಈ ಬಜೆಟ್ ಸಿದ್ಧಪಡಿಸಿದ್ದೇನೆ. ಸಾಮಾನ್ಯ ಜನತೆಯ ಮೇಲೆ ಯಾವ ಒತ್ತಡವೂ ಬೀಳದಂತೆ ಬಜೆಟ್ ಸಿದ್ಧಪಡಿಸಿದ್ದೇನೆ. ಹೊಸ ಯೋಜನೆಗಳ ಮೇಲೂ ಒತ್ತು ನೀಡಿದ್ದೇನೆ. ಅದಕ್ಕಿಂತಲೂ ಈ ಬಾರಿಯ ಪ್ರಮುಖ ವಿಷಯಗಳ ಬಗ್ಗೆ ಹೆಚ್ಚು ಗಮನ ನೀಡಿದ್ದೇನೆ. ಉದಾಹರಣೆಗೆ, ವಿದ್ಯುತ್ ಅಭಾವ, ನೆರೆ ಸಂತ್ರಸ್ಥರಿಗೆ ನೆರವು ಈ ಎರಡು ವಿಚಾರಗಳು ಸದ್ಯಕ್ಕೆ ಅತ್ಯಂತ ಅಗತ್ಯದ ವಿಚಾರಗಳು. ಅವೆಲ್ಲವುಗಳ ಬಗ್ಗೆ ಬಜೆಟ್ ಪ್ರಕಟಿಸಿದ ತಕ್ಷಣ ಹೆಚ್ಚು ಗಮನ ನೀಡಿ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.

ಪ್ರತಿಪಕ್ಷದವರು ನನ್ನನ್ನು ಟೀಕೆ ಮಾಡಿದಷ್ಟು ಯಾವ ಮುಖ್ಯಮಂತ್ರಿಯನ್ನೂ ಟೀಕೆ ಮಾಡಿಲ್ಲ. ಆದರೆ, ನಾನು ಎದೆಗುಂದಿಲ್ಲ. ಇದರಿಂದ ಅವರಿಗೆ ಖಂಡಿತ ಯಾವ ರಾಜಕೀಯ ಲಾಭವೂ ಆಗೋದಿಲ್ಲ. ಅದು ಅವರ ಭ್ರಮೆ ಮಾತ್ರ ಎಂದೂ ಯಡಿಯೂರಪ್ಪ ಎಚ್ಚರಿಸಿದರು. ನೆರೆ ಪರಿಹಾರ ಕಾರ್ಯಕ್ರಮಗಳ ಬಗ್ಗೆ ಕೇಂದ್ರದ ಗೃಹ ಸಚಿವ ಪಿ.ಚಿದಂಬರಂ ಅವರೇ ಹೊಗಳುತ್ತಾರೆ. ಆದರೆ, ನಮ್ಮಲ್ಲಿನ ಪ್ರತಿಪಕ್ಷಕ್ಕೆ ಮಾತ್ರ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಅವರು ಕನಿಷ್ಠ ಸಹಕಾರವನ್ನೂ ನೀಡಿಲ್ಲ. ಆದರೂ ಕೇಂದ್ರದ ಸಹಕಾರದಿಂದ ಉತ್ತಮ ಕೆಲಸ ಮಾಡುತ್ತಿದ್ದೇನೆ. ಬಜೆಟ್‌ನಲ್ಲೂ ಇದಕ್ಕೆ ಒತ್ತು ನೀಡಿದ್ದೇನೆ ಎಂದು ತಿಳಿಸಿದರು.

ಈವರೆಗಿನ ಬಜೆಟ್‌ನ ಯೋಜನೆಗಳು ಅನುಷ್ಠಾನಕ್ಕೆ ಬಂದಿಲ್ಲ ಎಂಬ ಪ್ರತಿಪಕ್ಷಗಳ ಟೀಕೆಗೆ ಉತ್ತರಿಸಿದ ಅವರು, ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಯೋಜನೆಗಳ ಅನುಷ್ಠಾನ ಆಗಿದೆ ಎಂದರು.

ಬೆಲೆ ಏರಿಕೆಯ ಕಡಿವಾಣಕ್ಕೆ ಸರ್ಕಾರ ಬಜೆಟ್‌ನಲ್ಲಿ ಕ್ರಮ ಕೈಗೊಂಡಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಬೆಲೆ ಏರಿಕೆಯ ವಿಚಾರ ಕೇಂದ್ರ ಸರ್ಕಾರದ ಕೈಯಲ್ಲಿದೆ. ಹಾಗಾಗಿ ಇಂಥ ವಿಷಯದ ಬಗ್ಗೆ ರಾಜ್ಯ ಸರ್ಕಾರದ ಕೈಯಲ್ಲಿ ಹೆಚ್ಚು ಸ್ವಾತಂತ್ರ್ಯ ಇಲ್ಲ. ಆದರೂ, ರಾಜ್ಯದ ಇತಿಮಿತಿಯಲ್ಲಿ ಬೆಲೆ ಏರಿಕೆಯ ತೊಂದರೆಗೆ ಕಡಿವಾಣ ಹಾಕಲು ಪ್ರಯತ್ನ ಪಡುತ್ತೇನೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ