ರೆಡ್ಡಿಯವರೇ ನೀವು ತುಂಬಾ ಗ್ರೇಟ್ ಕಣ್ರೀ: ಸಿದ್ದರಾಮಯ್ಯ ವ್ಯಂಗ್ಯ
ಬೆಂಗಳೂರು, ಶುಕ್ರವಾರ, 5 ಮಾರ್ಚ್ 2010( 10:52 IST )
NRB
'ಕರುಣಾಕರ ರೆಡ್ಡಿಯವರೇ ನೀವು ತುಂಬಾ ಗ್ರೇಟ್ ಕಣ್ರೀ...ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರನ್ನೇ ಅಲ್ಲಾಡಿಸಿ ಬಿಟ್ರಲ್ಲಾ...ಐ ಕಾಂಪ್ಲಿಮೆಂಟ್ ಯುವರ್ ಸ್ಟ್ರೆಂಥ್' ಹೀಗೆಂದು ಹೊಗಳಿಕೆಯಲ್ಲಿಯೇ ಲೇವಡಿ ಮಾಡಿದವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ.
ಗುರುವಾರ ವಿಧಾನಸಭೆಯ ಕಲಾಪದಲ್ಲಿ ಕಂದಾಯ ಸಚಿವ ಕರುಣಾಕರ ರೆಡ್ಡಿ ಅವರನ್ನು ಉದ್ದೇಶಿಸಿ ಈ ರೀತಿ ಹೇಳಿದಾಗ ರೆಡ್ಡಿಯವರು ಮುಜುಗರಕ್ಕೊಳಗಾದ ಪ್ರಸಂಗ ನಡೆಯಿತು.
'ನೀವು ಯಡಿಯೂರಪ್ಪ ಅವರನ್ನು ಗಡಗಡ...ನಡುಗಿಸಿ ಬಿಟ್ರಿ...ಈಗಲೂ ಅವರು ನಿಮ್ಮನ್ನು ಮುಟ್ಟಲಿಕ್ಕಾಗಲ್ಲ. ಆ ಮಟ್ಟಿಕ್ಕೆ ಯು ಆರ್ ಎಸ್ಟಾಬ್ಲಿಷ್ಡ್' ಎಂದರು.
ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು...ಈ ತ್ರಿಮೂರ್ತಿಗಳ ಶಕ್ತಿಯನ್ನು ಮೆಚ್ಚಿದೆ ಎಂದು ಸಿದ್ದರಾಮಯ್ಯ ಅವರು ವ್ಯಂಗ್ಯಭರಿತವಾಗಿ ಹೇಳುತ್ತಿದ್ದುದನ್ನು ಇಡೀ ಸದನ ಆಸಕ್ತಿಯಿಂದ ಕೇಳುತ್ತಿತ್ತು.
ಇಂತಹ ಅನುಭವ ಯಾವುದೇ ಮುಖ್ಯಮಂತ್ರಿಗಳಿಗೆ ಆಗಿಲ್ಲ. ನಾವು ನೋಡಿಲ್ಲ. ಶ್ರೀರಾಮುಲು ಮತ್ತು ರೆಡ್ಡಿ ಸಹೋದರರ ಮಾತನ್ನು ಅಧಿಕಾರಿಗಳು ಕೇಳ್ತಾರೆ. ನಿಮಗೆ ಬೇಕಾದ ಅಧಿಕಾರಿಗಳು ಬೇಕಾದರೆ ರೆಡ್ಡಿಗಳ ಕೈಯಲ್ಲಿ ನೋಟ್ ಹಾಕಿಸಿ ಎಂದು ಸಿಎಂ ಉದಾಸಿ ಮತ್ತು ಇತರ ಸಚಿವರ ಕಡೆ ನೋಡುತ್ತಾ ಹೇಳಿದ್ದು ಕೂಡ ಸದಸ್ಯರ ಮುಖದಲ್ಲಿ ನಗು ಮೂಡುವಂತೆ ಮಾಡಿತು.
ಯಡಿಯೂರಪ್ಪ ಅವರು ಕುರ್ಚಿ ಉಳಿಸಿಕೊಳ್ಳಲಿಕ್ಕಾಗಿ ಏನೆಲ್ಲಾ ಮಾಡಿದರು ಅಂತ ಅವರೇ ಬಾಯಿಬಿಟ್ಟು ಹಲುಬಿದ್ದಾರೆ. ಆ ಕುರ್ಚಿಗಾಗಿ ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ಕೈಬಿಡಬೇಕಾಯಿತು. ಉತ್ತಮ ಅಧಿಕಾರಿ ಬಳಿಗಾರ್ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.
ಈಗಲೂ ಯಡಿಯೂರಪ್ಪ ಅವರು ಸ್ವತಂತ್ರರಾಗಿ ಯಾವುದೇ ತೀರ್ಮಾನ ಕೈಗೊಳ್ಳದ ಸ್ಥಿತಿಯಲ್ಲಿದ್ದಾರೆ ಎಂದು ವ್ಯಂಗ್ಯಭರಿತ ಮಾತುಗಳಿಂದ ಚುಚ್ಚಿದರು. ಆದರೆ ಸಿದ್ದರಾಮಯ್ಯ ಅವರು ಇಷ್ಟೆಲ್ಲಾ ವ್ಯಂಗ್ಯವಾಡುತ್ತಿದ್ದರು ಕೂಡ ಯಡಿಯೂರಪ್ಪ ಆಗಲಿ, ರೆಡ್ಡಿ ಸಹೋದರರು ನಗುನಗುತ್ತಾ ಕುಳಿತಿದ್ದದ್ದು ವಿಶೇಷವಾಗಿತ್ತು.
ರೇಣುಕಾಚಾರ್ಯ ತುಂಬಾ ಬುದ್ಧಿವಂತ: ಬಳ್ಳಾರಿಯ ಗಣಿಧಣಿಗಳನ್ನು ವ್ಯಂಗ್ಯವಾಗಿಯೇ ಚುಚ್ಚಿದ ನಂತರ ಸಿದ್ದರಾಮಯ್ಯನವರ ಮಾತು ಹೊರಳಿದ್ದು, ಅಬಕಾರಿ ಸಚಿವ ರೇಣುಕಾಚಾರ್ಯ ಕಡೆಗೆ. ರೇಣುಕಾಚಾರ್ಯ ತುಂಬಾ ಬುದ್ಧಿವಂತ ಎಂಬುದು ಸಾಬೀತಾಯಿತು ನೋಡಿ. ಸಿಎಂ ಜೊತೆ ಸುತ್ತಿ,ಸುತ್ತಿ ಏನು ಪ್ರಯೋಜನ ಇಲ್ಲ ಅಂದುಕೊಂಡ ಅವರು ಕೊನೆಗೆ ಶ್ರೀರಾಮುಲು ಗುಂಪಿಗೆ ಸೇರಿ ಸಚಿವರಾದರು ಎಂದು ಹೇಳಿದರು.
ಮುಖ್ಯಮಂತ್ರಿಗಳ ಜೊತೆ ಇದ್ದರೆ ತನಗೇನೂ ಲಾಭ ಇಲ್ಲ ಎಂದುಕೊಂಡ ರೇಣುಕಾಚಾರ್ಯ ರೆಡ್ಡಿ ಗ್ಯಾಂಗ್ ಸೇರಿ ಕೊನೆಗೂ ತಮಗೆ ಬೇಕಾದ ಲಾಭ ತರುವ ಸಚಿವಗಿರಿಯನ್ನೇ ಗಿಟ್ಟಿಸಿಕೊಂಡರು ಎಂದು ರೇಣುಕಾಚಾರ್ಯರತ್ತ ಸಿದ್ದು ದೃಷ್ಟಿ ಹಾಯಿಸಿದಾಗ ಮುಸಿ,ಮುಸಿ ನಗುತ್ತಿದ್ದರು. ಅಂತೂ ಸದನದಲ್ಲಿ ರೆಡ್ಡಿ ಬ್ರದರ್ಸ್, ರೇಣುಕಾಚಾರ್ಯರ ರಾಜಕೀಯ ಪ್ರಹಸನಗಳನ್ನು ಹಾಸ್ಯದ ಮೂಲಕವೇ ಚುಚ್ಚಿ ತಮ್ಮ ಕಿಡಿಯನ್ನು ಹೊರಹಾಕಿದ್ದರು.